ಶ್ರೀಮಂಗಲ, ಸೆ. 14: ಗೋಣಿಕೊಪ್ಪ ಎ.ಪಿ.ಎಂ.ಸಿ.ಯಲ್ಲಿ ಕರಿಮೆಣಸನ್ನು ಆಮದು ಮಾಡಿಕೊಂಡು ಕಲÀಬೆರಕೆ ಮಾಡಿ, ಅವ್ಯವಹಾರ ನಡೆದಿರುವ ಆರೋಪದ ಬೆನ್ನಲ್ಲೆ ಜಿಲ್ಲೆಯ ಜೆ.ಡಿ.ಎಸ್. ನಿಯೋಗ ವಕೀಲ ಮಚ್ಚಮಾಡ ಟಿ. ಕಾರ್ಯಪ್ಪ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಂಸದ ಪುಟ್ಟರಾಜು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಗೋಣಿಕೊಪ್ಪ ಎಪಿಎಂಸಿಗೆ ವಿಯೆಟ್ನಾಂನಿಂದ ಕರಿಮೆಣಸು ಆಮದು ಮಾಡಿಕೊಂಡು ಕೊಡಗಿನ ಕರಿಮೆಣಸಿನೊಂದಿಗೆ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಹಾಗೂ ರಪ್ತು ಮಾಡುತ್ತಿರುವ ಪರಿಣಾಮ ದೇಶಿಯ ಕರಿಮೆಣಸಿಗೆ ದರ ಕುಸಿಯುವಂತೆ ಆಗಿದೆ. ಇದರಿಂದ ಸ್ಥಳೀಯ ಕರಿಮೆಣಸು ಬೆಳೆಗಾರರಿಗೆ ಭಾರಿ ಅನ್ಯಾಯವಾಗಿದೆ. ಇದನ್ನು ಖಂಡಿಸಿ, ಬೆಳೆಗಾರ ಒಕ್ಕೂಟ, ಜೆ.ಡಿ.ಎಸ್. ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಭಟನೆ ನಡೆಸಿರುವದಾಗಿ ಪ್ರಮುಖರ ಗಮನಕ್ಕೆ ನಿಯೋಗ ಮನವರಿಕೆ ಮಾಡಿದೆ. ಬೆಳೆಗಾರರ ಹಿತದೃಷ್ಟಿಯಿಂದ ಕೂಡಲೇ ಕರಿಮೆಣಸು ಆಮದನ್ನು ಸ್ಥಗಿತಗೊಳಿಸಲು ಮನವಿ ಮಾಡಿದೆ.

ಗೋಣಿಕೊಪ್ಪಲು ಎ.ಪಿ.ಎಂ.ಸಿ. ಯಲ್ಲಿ ಕಳೆದ ಹತ್ತು ವರ್ಷದಿಂದ ಭಾರಿ ಅವ್ಯವಹಾರವಾಗಿದ್ದು, ಇಲ್ಲಿ ರೈತರು ಹಾಗೂ ಬೆಳೆಗಾರರನ್ನು ವಂಚಿಸಿ ದಂಧೆ ನಡೆಸುತ್ತಿವೆ. ಇಡೀ ಕರಿಮೆಣಸು ಉತ್ಪಾದನೆಯನ್ನು ಹಾಗೂ ಅಡಿಕೆ ಉತ್ಪಾದನೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು, ಹೊರಗೆ ಉತ್ತಮ ಮಾರುಕಟ್ಟೆ ಇದ್ದರೂ ರೈತರಿಗೆ ದೊರೆಯಲು ಬಿಡದೆ ತಾವೇ ಲಾಭಗಳಿಸುತ್ತಿದ್ದಾರೆ. ತಾವು ನಿಗದಿಪಡಿಸುವ ದರಕ್ಕೆ ಅನಿವಾರ್ಯವಾಗಿ ಬೆಳೆಗಾರರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ. ಇವೆಲ್ಲದರಲ್ಲಿ ಪ್ರಸ್ತುತ ಇರುವ ಆಡಳಿತ ಮಂಡಳಿ ಹಾಗೂ ಈ ಹಿಂದಿನ ಆಡಳಿತ ಮಂಡಳಿ ಶಾಮೀಲಾಗಿರುವ ಶಂಕೆ ಇದೆ ಎಂದು ನಿಯೋಗ ಮನವರಿಕೆ ಮಾಡಿತು. ಈ ಸಂಧರ್ಭ ನಿಯೋಗದೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು, ಕೇಂದ್ರ ಸರಕಾರದ ಆಮದು ನೀತಿಯಿಂದ ಕರಿಮೆಣಸು ಬೆಳೆಗಾರರಿಗೆ ಉಂಟಾಗಿರುವ ಅನ್ಯಾಯದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು..

ಸಂಸದ ಪುಟ್ಟರಾಜು ಅವರು ಮನವಿಗೆ ಸ್ಪಂದಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು. ಅಲ್ಲದೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಒತ್ತಡ ತರುವದಾಗಿ ತಿಳಿಸಿದರು. ಕರಿಮೆಣಸು ಆಮದನ್ನು ತಕ್ಷಣ ಸ್ಥಗಿತಗೊಳಿಸಲು ಕೇಂದ್ರ ಸರಕಾರದೊಂದಿಗೆ ಪ್ರಸ್ತಾಪಿಸಲಾಗು ವದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿಯೋಗದಿಂದ ಪೂರ್ಣ ಮಾಹಿತಿ ಪಡೆದರು. ವಿಯೆಟ್ನಾಂನಿಂದ ಕರಿಮೆಣಸು ಆಮದು ಮಾಡಿಕೊಳ್ಳಲು ಎ.ಪಿ.ಎಂ.ಸಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಅವಕಾಶ ನೀಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ರೈತರ ಅನುಕೂಲಕ್ಕಾಗಿ ಸರಕಾರ ಇಂತಹ ದಂಧೆಗೆ ತಕ್ಷಣ ಕಡಿವಾಣ ಹಾಕಲು ಗಮನ ಸೆಳೆಯುವ ಭರವಸೆ ನೀಡಿದರು.

ನಿಯೋಗದಲ್ಲಿ ಜೆ.ಡಿ.ಎಸ್. ಪ್ರಮುಖರಾದ ಸಣ್ಣುವಂಡ ಶ್ರೀನಿವಾಸ್, ಮತ್ರಂಡ ಸುಕು ಬೋಪಣ್ಣ, ಚೇಂದ್ರಿಮಾಡ ಗಣೇಶ್, ಮನೆಯಪಂಡ ಬೆಳ್ಯಪ್ಪ, ಉಳುವಂಗಡ ದತ್ತ, ವಿನೇಶ್, ಮುನೀರ್, ಸುರೇಶ್, ಟಿ.ಎಸ್. ಮುತ್ತ, ಕಾರ್ಮಾಡ್ ಸುಬ್ಬಣ್ಣ ಮತ್ತಿತರರು ಇದ್ದರು.