*ಗೋಣಿಕೊಪ್ಪಲು, ಸೆ. 14 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ ದಲ್ಲಿ ವಿಯೇಟ್ನಾಂ ಕಾಳುಮೆಣಸನ್ನು ಕೊಡಗಿನ ಮೆಣಸಿಗೆ ಮಿಶ್ರಣ ಮಾಡಿ, ಕೊಡಗಿನ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದ್ದ ವ್ಯಾಪಾರಿಯ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಈ ನಿರ್ಣಯಕ್ಕೆ ಒಮ್ಮತ ಸೂಚಿಸಿದರು.

ಆರ್.ಎಂ.ಸಿ. ಗೋದಾಮಿನಲ್ಲಿ ಅಕ್ರಮವಾಗಿ ಕಾಳು ಮೆಣಸನ್ನು ಮಿಶ್ರಣ ಮಾಡುವ ಮೂಲಕ ಕೊಡಗಿನ ರೈತರಿಗೆ ನಷ್ಟ ಉಂಟುಮಾಡುತ್ತಿದ್ದರೂ ವ್ಯಾಪಾರಿಯ ಬಗ್ಗೆ ಆರ್.ಎಂ.ಸಿ. ಅಧಿಕಾರಿ ಕ್ರಮ ಕೈಗೊಂಡಿಲ್ಲ. ವ್ಯಾಪಾರಿಯ ಮೇಲೆ ಸೂಕ್ತ ಕ್ರಮಕ್ಕೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಬೇಕು ಎಂದು ಮಾಳೇಟಿರ ಪ್ರಶಾಂತ್ ಉತ್ತಪ್ಪ ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಉತ್ತರವಾಗಿ ಸಭೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸುವ ನಿರ್ಣಯಕ್ಕೆ ಮುಂದಾಯಿತು.

ಆರ್.ಎಂ.ಸಿ. ಆವರಣದಲ್ಲಿ ಕಾಳು ಮೆಣಸು ಹಗರಣ ನಡೆಯಲು ಎಪಿಎಂಸಿ ಕಾರ್ಯದರ್ಶಿ ಕಾರಣರಾಗಿದ್ದಾರೆ. ಈ ಹಿಂದೆ ಆಡಳಿತ ಮಂಡಳಿಯ ಅವಧಿ ಮುಗಿದ ಸಂದರ್ಭ ಕಾರ್ಯದರ್ಶಿಗಳ ಅಧಿಕಾರದಲ್ಲಿ ಕಚೇರಿ ಆಡಳಿತ ನಡೆಯುತ್ತಿತ್ತು. ಇದನ್ನು ದುರ್ಬಳಕೆ ಮಾಡಿಕೊಂಡ ಮೆಣಸು ವ್ಯಾಪಾರಿ ಕಾರ್ಯದರ್ಶಿಗಳಿಂದ ಗೋದಾಮು ಪಡೆದು ಅನಧಿಕೃತವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾಗಿದೆ. ಇದನ್ನು ಈಗಿನ ಆಡಳಿತ ಮಂಡಳಿ ಪ್ರಸ್ತಾಪಿಸಿ, ಬೆಳೆಗಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಕಾಳುಮೆಣಸು ಕಲಬೆರಕೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತರಲಾಗಿತ್ತು ಎಂದು ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾಹಿತಿ ನೀಡಿದರು.

ಆರ್.ಎಂ.ಸಿ. ಸ್ವತಂತ್ರ್ಯ ಸಂಸ್ಥೆ ಯಾಗಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸುವ ಬದಲು ರೈತರಿಗೆ ಕಾಳುಮೆಣಸು ಕಲಬೆರಕೆಯಿಂದ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಹೋರಾಟ ನಡೆಸುವ ಹೆಚ್ಚಿನ ತನಿಖೆಗೆ ಆಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸುವ ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ತಿಳಿಸಿದರು. ಮದ್ಯದ ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕುಟ್ಟಂಡ ಅಜಿತ್ ಕರುಂಬಯ್ಯ ಅಬಕಾರಿ ಅಧಿಕಾರಿ ಶ್ರೀನಿವಾಸ ಅವರಲ್ಲಿ ಒತ್ತಾಯಿಸಿದರು.

ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಆದರೂ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಸದಸ್ಯ ಪಲ್ವೀನ್ ಪೂಣಚ್ಚ ಆರೋಪಿಸಿದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ತನಿಖೆ ಕೈಗೊಂಡು ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಈ ಬಾರಿ ದಸರಾ ರಜೆಯನ್ನು ಅಕ್ಟೋಬರ್ 11 ರಿಂದ 25ರವರೆಗೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೀನುಗಾರಿಕೆ ಇಲಾಖೆಯಿಂದ ಸುಮಾರು 6 ಲಕ್ಷ ಮೀನು ವಿತರಣಾ ಕಾರ್ಯ ನಡೆದಿದೆ ಎಂದು ಅಧಿಕಾರಿ ಪ್ರಿಯಾ ತಿಳಿಸಿದರು. ಪಶು ಸಂಗೋಪನಾ ಇಲಾಖೆ ವತಿಯಿಂದ ಕಾಲುಬಾಯಿ ರೋಗದ ಲಸಿಕೆಯನ್ನು ತಾಲೂಕಿನಾದ್ಯಂತ 29 ಸಾವಿರದ 360 ಜಾನುವಾರುಗಳಿಗೆ ನೀಡಲಾಗಿದೆ. ಕೊಕ್ಕರೆ ರೋಗಕ್ಕೆ ಶೇ.13ರಷ್ಟು ಚುಚ್ಚುಮದ್ದು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚುಚ್ಚುಮದ್ದು ಹಾಗೂ ಲಸಿಕೆಗಳನ್ನು ನೀಡಲು ಕಾರ್ಯಯೋಜನೆ ರೂಪುಗೊಂಡಿದೆ ಎಂದು ಪಶು ವೈದ್ಯಾಧಿಕಾರಿ ತಮ್ಮಯ್ಯ ತಿಳಿಸಿದರು.

ವಿಧವೆ ಮಹಿಳೆಯರನ್ನು ಮದುವೆಯಾದರೆ ವರನಿಗೆ ರೂ. 3 ಲಕ್ಷ ಹಾಗೂ ಪರಿಶಿಷ್ಟ ವರ್ಗದ ಮಹಿಳೆಯನ್ನು ವರಿಸಿದರೆ ರೂ. 2 ಲಕ್ಷ ಅನುದಾನ ದೊರೆಯಲಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು. ಗೋಣಿಕೊಪ್ಪಲು ಮುಖ್ಯರಸ್ತೆ ಹೊಂಡ ಬಿದ್ದಿದೆ. ದಸರಾ ಆಚರಣೆಗೆ ತಯಾರಿ ಪ್ರಾರಂಭವಾಗಿದ್ದು, ರಸ್ತೆಗಳ ದುರಸ್ತಿ ಕಾರ್ಯ ನಡೆಯಬೇಕಾಗಿದೆ ಎಂದು ಸದಸ್ಯ ಜಯಾ ಪೂವಯ್ಯ ತಿಳಿಸಿದರು.

ಪೊನ್ನಂಪೇಟೆ ಕುಟ್ಟ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಕುರುಚಲು ಕಾಡು ಬೆಳೆದು ರಸ್ತೆಯನ್ನು ಆವರಿಸಿದೆ. ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಪಘಾತಗಳು ನಡೆಯುವ ಸಂಭವ ಎದುರಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬೆಳ್ಳೂರು ಮಾರ್ಗದಲ್ಲಿ ರಸ್ತೆ ಅಪಘಾತ ನಡೆಯಲು ಈ ಕಾಡು ಹಬ್ಬಿಕೊಂಡಿರುವದೆ ಮುಖ್ಯ ಕಾರಣ ಎಂದು ಸದಸ್ಯ ಪಲ್ವೀನ್ ಪೂಣಚ್ಚ ಆರೋಪಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಲಿಂಗರಾಜು ಕಾಡುಗಳನ್ನು ಕಡಿಸಲಾಗುವದು. ಗೋಣಿಕೊಪ್ಪ ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರುತ್ತದೆ. ನಮ್ಮ ಕಾರ್ಯವಲಯಕ್ಕೆ ಬರುವದಿಲ್ಲ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗರ್ಬಿಣಿ, ಬಾಣಂತಿಯರಿಗೆ ಮದ್ಯಾಹ್ನದ ಪೌಷ್ಟಿಕ ಬಿಸಿಯೂಟ ನೀಡಲು ಸರಕಾರ ಮುಂದಾಗಿದೆ ಎಂದು ಅಧಿಕಾರಿ ಲೀಲಾವತಿ ಸಭೆಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೀನಾ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್. ಆರೋಗ್ಯ ಇಲಾಖೆ ಅಧಿಕಾರಿ ಡಾ.ಯತಿರಾಜ್, ತಾಳೆಬೆಳೆ ಅಧಿಕಾರಿ ಡೀನಾ, ತೋಟಗಾರಿಕಾ ಇಲಾಖೆ, ಚೆಸ್ಕಾಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಅಕ್ಷರ ದಾಸೋಹ ಇಲಾಖೆಯ ಅಧಿಕಾರಿಗಳು ಇಲಾಖೆಯ ಪ್ರಗತಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಪ್ರಕಾಶ್, ಆಶಾ ಪೂಣಚ್ಚ, ಆಶಾ ಜೇಮ್ಸ್, ಕಾವೇರಮ್ಮ, ಚೆನ್ನಮ್ಮ, ರಾಜು, ಶೋಭಾ, ಸರೋಜ, ಸುಮಾ ಉಪಸ್ಥಿತರಿದ್ದರು.