ವೀರಾಜಪೇಟೆ, ಸೆ. 14: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ಮನೆಯಲ್ಲಿ ಯಾರು ಇಲ್ಲದ ಸಮಯ ಸಾಧಿಸಿ ಅಲ್ಮೇರಾದಲ್ಲಿದ್ದ ಚಿನ್ನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿ ಹೆಚ್.ಎಂ.ಸುಬ್ರಮಣಿ ಅಲಿಯಾಸ್‍ರವಿ ಎಂಬಾತನನ್ನು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ಆತನನ್ನು 15 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಮಗ್ಗುಲ ಗ್ರಾಮದ ಹೆಚ್.ಕೆ. ದೇವಯ್ಯ ಅವರು ಮನೆಯಿಂದ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಮಯದಲ್ಲಿ ಸುಬ್ರಮಣಿ ಮನೆಗೆ ಹಿಂಬದಿಯಿಂದ ಪ್ರವೇಶ ಮಾಡಿ ಕೊಠಡಿಯೊಂದರ ಅಲ್ಮೇರದಲ್ಲಿದ್ದ ಚಿನ್ನದ ಪತ್ತಾಕ್, ಓಲೆ ಮತ್ತು ರೂ 2000 ನಗದು ಅಪಹರಿಸಿದ್ದಾನೆ. ದೇವಯ್ಯ ಮನೆಗೆ ಬಂದಾಗ ಅಲ್ಮೇರಾದ ಬಾಗಿಲು ತೆರೆದಿರುವದು ಕಂಡು ಬಂದಿದ್ದು, ತಕ್ಷಣ ನಗರ ಪೊಲೀಸರಿಗೆ ದೂರು ನೀಡಿದರು.

ಆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಶಯದ ಮೇರೆ ಸುಬ್ರಮಣಿಯನ್ನು ತನಿಖೆಗೊಳಪಡಿಸಿದಾಗ ಆತ ಚಿನ್ನಾಭರಣ ಕಳವು ಮಾಡಿರುವದು ಬೆಳಕಿಗೆ ಬಂತು. ನಂತರ ಪೊಲೀಸರು 25,000 ಮೌಲ್ಯದ ಚಿನ್ನದ ಓಲೆ. ಚಿನ್ನದ ಪತ್ತಾಕ್ ಹಾಗೂ ನಗದು ರೂ. 2000 ವನ್ನು ವಶಪಡಿಸಿಕೊಂಡಿದ್ದಾರೆ.