ವೀರಾಜಪೇಟೆ, ಸೆ. 14: ವೀರಾಜಪೇಟೆ ಪಟ್ಟಣಕ್ಕೆ ಒತ್ತಾಗಿರುವ ನಿಸರ್ಗ ಲೇಔಟ್‍ನ ನಿವಾಸಿ ತಟ್ಟಂಡ ಸುರೇಶ್ ಎಂಬವರ ಒಂದನೇ ಅಂತಸ್ತಿನ ಬಾಡಿಗೆ ಮನೆಗೆ ಇಬ್ಬರು ನುಗ್ಗಿ ನಗದು ಹಣ ದರೋಡೆ ಮಾಡಿರುವದಾಗಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸುರೇಶ್ ಅವರ ಪತ್ನಿ ಅಶ್ವಿನಿ (36) ಇಂದು ಸಂಜೆ 6 ಗಂಟೆಗೆ ಮನೆಯಲ್ಲಿ ಒಬ್ಬರೇ ಇದ್ದ ಸಮಯವನ್ನು ಸಾಧಿಸಿ ಇಬ್ಬರು ಕಳ್ಳರು ಮನೆಗೆ ನುಗ್ಗಿ ಅಶ್ವಿನಿಯ ಕೈಗಳನ್ನು ಹಿಂದಕ್ಕೆ ಕಟ್ಟಿ ಹಾಕಿ ಕಣ್ಣಿಗೆ ಖಾರಪುಡಿ ಎರಚಿ ಮನೆಯ ಬೆಡ್‍ರೂಮಿನಲ್ಲಿದ್ದ ಎರಡು ಅಲ್ಮೇರಾವನ್ನು ಹುಡುಕಾಡಿ ಅಲ್ಮೇರಾದಲ್ಲಿ ದೊರೆತ ರೂ. 5000 ನಗದು ಹಣವನ್ನು ದೋಚಿದ್ದಾರೆ. ಅಲ್ಮೇರಾದಲ್ಲಿ ಯಾವ ಯಾವ ಆಭರಣಗಳನ್ನು ದರೋಡೆ ಮಾಡಲಾಗಿದೆ ಎಂಬದನ್ನು ಖುದ್ದು ಪರಿಶೀಲನೆಯಿಂದ ತಿಳಿಯಬೇಕಾಗಿದೆ ಎಂದು ಸುರೇಶ್ ಪೊಲೀಸರಿಗೆ ತಿಳಿಸಿದ್ದಾರೆ.

ಸಂಜೆ ದರೋಡೆಕೋರರಿಬ್ಬರು ಮನೆಗೆ ನುಗ್ಗಿದ ಸ್ವಲ್ಪ ಸಮಯದಲ್ಲಿ ಅಶ್ವಿನಿಯ ಪತಿ ಸುರೇಶ್ ಅನಿರೀಕ್ಷತವಾಗಿ ಮನೆಗೆ ಬಂದಾಗ ಇಬ್ಬರು ಮನೆಯ ಹಿಂಬದಿಯಿಂದ ಪರಾರಿಯಾದರು. ಭಯದ ವಾತಾವರಣದಲ್ಲಿ ಮಂಚದ ಮೇಲಿದ್ದ ಅಶ್ವಿನಿಯನ್ನು ತಕ್ಷಣ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸುರೇಶ್ ಮಾಧ್ಯಮದವರಿಗೆ ತಿಳಿಸಿದರು.

ವೀರಾಜಪೇಟೆ ನಗರ ಪೊಲೀಸರು ಸ್ಥಳದ ಪರಿಶೀಲನ ನಡೆಸಿದ ನಂತರ ರಾತ್ರಿ 9.30ರ ವೇಳೆ ಮಡಿಕೇರಿಯಿಂದ ಶ್ವಾನದಳವನ್ನು ಕರೆಸಿ ಶೋಧನೆ ನಡೆಸಲಾಯಿತು.

-ಡಿ.ಎಂ.ಆರ್.