ಮಡಿಕೇರಿ, ಸೆ. 13: ಹಿರಿಯರನ್ನು ಪ್ರೀತಿ, ವಿಶ್ವಾಸ, ಗೌರವದಿಂದ ಕಾಣಬೇಕು. ಮುಪ್ಪು ಎಲ್ಲರಿಗೂ ಬರುತ್ತದೆ ಎಂಬುದನ್ನು ಯುವ ಜನರು ಅರಿಯಬೇಕು. ಹಿರಿಯರನ್ನು ಗೌರವಿಸುವದರ ಜೊತೆಗೆ ಹಿರಿಯರ ಮಾರ್ಗದರ್ಶನ ಪಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಯುವ ಜನರಿಗೆ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸಲಹೆ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ವೇದಿಕೆ, ವಿಕಾಸ್ ಜನಸೇವಾ ಕೇಂದ್ರ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಹಿರಿಯ ನಾಗರಿಕರ ಫೋರಂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಹಿರಿಯ ನಾಗರಿಕರಿಗೆ ಜಿಲ್ಲಾಮಟ್ಟದ ಕ್ರೀಡಾ ಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಯುವ ಜನರು ಹಿರಿಯರ ಮಾರ್ಗದರ್ಶನ ಪಡೆಯುವದು ಕಡಿಮೆಯಾಗಿದೆ. ಇದರಿಂದ ಉತ್ತಮ ಸಮಾಜ ಕಾಣಲು ಅಸಾಧ್ಯ. ಹಿರಿಯರ ಮಾರ್ಗದರ್ಶನವಿದ್ದಲ್ಲಿ ಮಾತ್ರ ಕುಟುಂಬ ನಿರ್ವಹಣೆ, ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಹೆತ್ತ ತಾಯಿ ಮಕ್ಕಳನ್ನು ಒಂದೇ ರೀತಿ ನೋಡುತ್ತಾರೆ. ಮಕ್ಕಳು ಪೋಷಕರನ್ನು ಒಂದೇ ರೀತಿ ನೋಡುವದು ಕಂಡು ಬರುತ್ತದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಬೇಕು.

ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಗಲು ಯೋಗಕ್ಷೇಮ ಕೇಂದ್ರ ನಡೆಯುತ್ತಿದ್ದು, ಹಿರಿಯ ನಾಗರಿಕರಿಗೆ ಕಾಫಿ, ಟೀ, ಮಧ್ಯಾಹ್ನದ ಊಟ ನೀಡಲಾಗುತ್ತದೆ. ಜೊತೆಗೆ ದಿನಪತ್ರಿಕೆ ಓದಲು ಮತ್ತು ಟಿ.ವಿ. ನೋಡಲು ಅವಕಾಶವಿದೆ ಎಂದು ತಿಳಿಸಿದರು.

ಹಿರಿಯ ನಾಗರಿಕರ ವೇದಿಕೆಯ ಅರವಿಂದ ಅಣ್ಣಪ್ಪ ಮಾತನಾಡಿ, ಹಿರಿಯ ನಾಗರಿಕರು ಕೀಳರಿಮೆ ಮಾಡಿಕೊಳ್ಳಬಾರದು. ಉತ್ಸಾಹ ಮತ್ತು ಆಶಾಭಾವದಿಂದ ಬದುಕಬೇಕು. ಹಿರಿಯರೊಂದಿಗೆ ಸಂತಸ ವಿನಿಮಯ ಮಾಡಿಕೊಳ್ಳಬೇಕು. ಇತರರನ್ನು ದೂರುವದರಿಂದ ಯಾವದೇ ಪ್ರಯೋಜನವಿಲ್ಲ ಎಂದು ನುಡಿದರು.

ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷೆ ಲೀಲಾವತಿ, ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ದೇವರಾಜು, ಹಗಲು ಯೋಗ ಕ್ಷೇಮ ಕೇಂದ್ರದ ಕಾರ್ಯದರ್ಶಿ ನಿರಂಜನ್, ಸ್ತ್ರೀಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕರಾದ ಸತೀಶ್ (ಮಡಿಕೇರಿ), ಚಂದ್ರು (ಕೂಡಿಗೆ), ವಿಕಾಸ್ ಜನಸೇವಾ ಸಂಸ್ಥೆಯ ಅಧ್ಯಕ್ಷ ರಮೇಶ್, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಂಯೋಜಕ ಸಿ. ಮಹದೇವಸ್ವಾಮಿ, ಮದ್ಯಪಾನ ವಿರೋಧಿ ಕೇಂದ್ರದ ಮೇಲ್ವಿಚಾರಕ ಪ್ರಭು, ಗ್ರೀನ್ ಡಾಟ್ ಸಂಸ್ಥೆಯ ಮೇಲ್ವಿಚಾರಕರಾದ ವಿಶ್ವನಾಥ್, ಇತರರು ಇದ್ದರು.

ಓಟ, ಶಾಟ್‍ಪುಟ್, ಥ್ರೋಯಿಂಗ್ ಕ್ರಿಕೆಟ್ ಬಾಲ್, ಏಕ ಪಾತ್ರಾಭಿನಯ, ಜಾನಪದ ಗೀತೆ ಮತ್ತಿತರ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.