ಮಡಿಕೇರಿ, ಸೆ. 13: ನರಿಯಂದಡ ಪ್ರಾಥಮಿಕ ಶಾಲೆಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರುಗಿತು. ಕಟ್ಟಡ ಉದ್ಘಾಟನೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು.

ಶಾಲಾ ಆಡಳಿತ ಮಂಡಳಿ ನಿರ್ದೇಶಕ ಚೇನಂಡ ಎಂ. ಸುರೇಶ್ ನಾಣಯ್ಯ ಪ್ರಾಸ್ತಾವಿಕ ಮಾತನಾಡಿ, ಶಾಲೆಯ ಏಳುಬೀಳುಗಳನ್ನು ಕೂಲಂಕಶವಾಗಿ ವಿವರಿಸಿದರು. ಕೆ.ಜಿ. ಬೋಪಯ್ಯ ಶಿಕ್ಷಣವೇ ಜೀವನದ ಬಹುಮುಖ್ಯ ಅಂಗ.

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ಬೆಳೆಸಿ ಕೊಳ್ಳಬೇಕು ಎಂಬ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅವರಿಗೆ ರಸ್ತೆ ಕಾಮಗಾರಿಯ ವಿಷಯವಾಗಿ ಮನವಿ ಪತ್ರ ಸಲ್ಲಿಸಲಾಯಿತು. ಬಿ.ಎ. ಹರೀಶ್ ಮಾತನಾಡಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಆಸಕ್ತಿ ಇರಬೇಕೆಂದು ವಿದ್ಯಾರ್ಥಿಗಳಿಗೆ ಹಿತನುಡಿಯಾಡಿದರು. ತಾ.ಪಂ. ಸದಸ್ಯೆ ಉಮಾಪ್ರಭು ಮಾತನಾಡಿ, ತನ್ನ ಅಧಿಕಾರವದಿಯಲ್ಲಿ ಶಾಲೆಯ ಅಭಿವೃದ್ಧಿಗೆ ಸ್ಪಂದಿಸುವದಾಗಿ ಹೇಳಿದರು.

ಗ್ರಾ.ಪಂ. ಅಧ್ಯಕ್ಷೆ ಬೇಬಿ ಶಿವಪ್ಪ ನೂರಕ್ಕೆ ನೂರು ಫಲಿತಾಂಶವನ್ನು ತಂದು ಕೊಡಲು ಶಿಕ್ಷಕರು ಈಗಿನಿಂದಲೇ ಶ್ರಮಿಸಬೇಕೆಂದು ನುಡಿದರು. ಬಿದ್ದಂಡ ಉಷಾ ದೇವಮ್ಮ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚೇನಂಡ ಸಿ. ಬೋಪಯ್ಯ, ನರಿಯಂದಡ ಗ್ರಾಮ ಪಂಚಾಯಿತಿ, ಚೆಯ್ಯಂಡಾಣೆಯ ಸದಸ್ಯರು, ಬೊಳ್ಳಚೆಟ್ಟಿರ ಸುರೇಶ್, ನರಿಯಂದಡ ಕೇಂದ್ರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಮನೋಹರ ನಾಯ್ಕ್ ಸ್ವಾಗತಿಸಿದರೆ, ನಿರೂಪಣೆಯನ್ನು ಬಿ.ಕೆ. ಮಮತ ಮತ್ತು ವಿ. ಮಮತ, ವಂದನಾರ್ಪಣೆಯನ್ನು ಟಿ.ಯು. ಬಬೀನಾ ನೆರವೇರಿಸಿದರು.