ಮಡಿಕೇರಿ, ಸೆ.13 : ಕಕ್ಕಬೆ ನೆಟ್ಟುಮಾಡು ಶ್ರೀಭಗವತಿ ದೇವಾಲಯದ ಗೇಟ್‍ನಲ್ಲಿ ಗೋವುಗಳ ಕಾಲುಗಳನ್ನು ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜಮಾಅತ್‍ನ ಮಾಜಿ ಅಧ್ಯಕ್ಷ ಮಕ್ಕಿ ನಾಸಿರ್ ಎಂಬವರು ವಾಟ್ಸ್‍ಪ್‍ನಲ್ಲಿ ಪ್ರಚೋದನಾಕಾರಿ ಹೇಳಿಕೆಯ ಧ್ವನಿಯನ್ನು ಮುದ್ರಿಸಿ ಹರಿಯ ಬಿಟ್ಟಿದ್ದಾರೆ ಎಂದು ಆರೋಪಿಸಿರುವ ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯದ ತಕ್ಕ ಮುಖ್ಯಸ್ಥ ಪಾಂಡಂಡ ನರೇಶ್, ಕಕ್ಕಬೆಯಲ್ಲಿ ಎಲ್ಲಾ ಧರ್ಮೀಯರು ಸೌಹಾರ್ದತೆ ಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಶ್ರೀಭಗವತಿ ದೇವಾಲಯವನ್ನು ಅಪವಿತ್ರಗೊಳಿಸುವ ಮೂಲಕ ಅಶಾಂತಿ ಮೂಡಿಸುವ ಪ್ರಯತ್ನ ನಡೆದಿದೆ. ಆದರೂ ಗ್ರಾಮಸ್ಥರು ಶಾಂತಿ, ಸಹನೆಯಿಂದಲೇ ನಡೆದುಕೊಂಡಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಮಕ್ಕಿ ನಾಸಿರ್ ಎಂಬವರು ಮಲಯಾಳ ಭಾಷೆಯಲ್ಲಿ ಧ್ವನಿ ಮುದ್ರಿಸಿದ ಪ್ರಚೋದನಾಕಾರಿ ಹೇಳಿಕೆಯನ್ನು ಕೊಡಗು ಸೇರಿದಂತೆ ಕೇರಳ ಭಾಗದ ಮುಸ್ಲಿಂ ಸಮುದಾಯಕ್ಕೆ ವಾಟ್ಸ್‍ಪ್ ಮೂಲಕ ರವಾನಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದಲ್ಲಿರುವ ಶಾಂತಿ, ಸೌಹಾರ್ದತೆಗೆ ದಕ್ಕೆಯಾಗಬಾರದೆನ್ನುವ ಉದ್ದೇಶದಿಂದ ನಾಸಿರ್ ಕ್ರಮದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು. ಸ್ಥಳೀಯ ಮಸೀದಿಯ ವಾರ್ಷಿಕ ಆಚರಣೆಗಳ ಸಂದರ್ಭ ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವಂತೆ ಹಿಂದೂಗಳು ಕೂಡ ಕಾಣಿಕೆ ಸಲ್ಲಿಸುವ ಸಂಪ್ರದಾಯವಿದೆ. ಈ ರೀತಿಯಾಗಿ ಹಿಂದೂ ಹಾಗೂ ಮುಸಲ್ಮಾನರು ಒಗ್ಗಟ್ಟಿನಿಂದಲೇ ಇರುವಾಗ ನಾಸಿರ್ ವಿನಾಕಾರಣ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಅಶಾಂತಿಗೆ ಅವಕಾಶ ಕಲ್ಪಿಸುತ್ತಿರುವದು ಖಂಡನೀಯವೆಂದು ನರೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ರಮೇಶ್ ತಿಮ್ಮಯ್ಯ, ಕಾರ್ಯದರ್ಶಿ ರವಿಚೋಮಣಿ, ಸದಸ್ಯರುಗಳಾದ ಸುರೇಶ್ ಬೆಳ್ಯಪ್ಪ ಹಾಗೂ ರೈನಾ ಕಾರ್ಯಪ್ಪ ಉಪಸ್ಥಿತರಿದ್ದರು.

ಜುಮ್ಮಾ ಮಸೀದಿ ಖಂಡನೆ

ಮಡಿಕೇರಿ : ಕಳೆದ ಅನೇಕ ವರ್ಷಗಳಿಂದ ಕೊಡಗು ಜಿಲ್ಲೆಯ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮಂದಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಇದನ್ನು ಸಹಿಸಲಾಗದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕಂಠಿ ಕಾರ್ಯಪ್ಪ ಅವರು ಕೋಮು ಪ್ರಚೋದನೆಯ ಭಾಷಣ ಮಾಡುವ ಮೂಲಕ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಗರದ ಬದ್ರಿಯಾ ಜಮಾ -ಅತ್, ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಜಿ. ಯೂಸುಫ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆ ಅತ್ಯಂತ ಖಂಡನೀಯವಾಗಿದ್ದು, ಕಂಠಿ ಕಾರ್ಯಪ್ಪ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬಂಧನಕ್ಕೆ ಆಗ್ರಹ

ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಚೆಟ್ಟಳ್ಳಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಭಜರಂಗದಳದ ಕಾರ್ಯಕರ್ತ ಆಗಿರುವ ಕಂಠಿಕಾರ್ಯಪ್ಪನನ್ನು ಪ್ರಚೋದನಾಕಾರಿ ಆರೋಪದಡಿಯಲ್ಲಿ ದೂರು ದಾಖಲಾಗಿ 9 ದಿನಗಳು ಕಳೆದರೂ ಬಂಧಿಸದೆ ಇರುವದು, ಪ್ರತಿಭಟನೆ ಮಾಡಿದಾಗ ಪ್ರತಿಭಟನಾಕಾರರ ವಿರುದ್ಧ ಕೇಸು ದಾಖಲಿಸಿರುವದು ಖಂಡನೀಯವಾಗಿದೆ. ಇದರ ಮೂಲಕ ಜಿಲ್ಲೆಯ ಪೊಲೀಸರ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿರುವದು ಖೇದಕರವಾದ ವಿಚಾರವಾಗಿರುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯದರ್ಶಿ ಟಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.

ಇಂತಹ ಕೋಮು ಪ್ರಚೋದನೆ ನೀಡುವವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ವಜಾ ಮಾಡಬೇಕು, ಪ್ರತಿಭಟನಾಕಾರರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆ

ಚೆಟ್ಟಳ್ಳಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಚೆಟ್ಟಳ್ಳಿಯಲ್ಲಿ ಪ್ರತಿಭಟನೆ ನಡೆಸಿದವು.

ಕಾಂಗ್ರೆಸ್ ಸ್ಥಾನೀಯ ಸಮಿತಿ, ಭಾರತೀಯ ಕಮ್ಮುನಿಸ್ಟ್ ಪಕ್ಷ, ಎಸ್.ಡಿ.ಪಿ.ಐ. ಕಾರ್ಯಕರ್ತರು, ಪ್ರಗತಿಪರ ಚಿಂತಕರು ಪಾಲ್ಗೊಂಡು ನಗರದ ಮುಖ್ಯ ರಸ್ತೆಯ ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಎಸ್.ಡಿ.ಪಿ.ಐ. ಪಕ್ಷದ ನಾಸಿರ್, ಕಾಂಗ್ರೆಸ್‍ನ ವಿ.ಪಿ. ಶಶಿಧರ್, ಡಿ.ವೈ.ಎಫ್.ಐ. ಕಾರ್ಯದರ್ಶಿ ಮಹೇಶ್, ಯುವ ಕಾಂಗ್ರೆಸ್‍ನ ರೆಜಿತ್ ಕುಮಾರ್ ಮಾತನಾಡಿದರು.

ವಾಲ್ನೂರು ತ್ಯಾಗತ್ತೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸೆÀ್ಯ ಸುನಿತಾ ಮಂಜುನಾಥ, ಚೆಟ್ಟಳ್ಳಿ ವಲಯ ಕಾಂಗ್ರೆಸ್ಸಿನ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ, ಕಾರ್ಯದರ್ಶಿ ಝುಬೇರ್, ಸದಸ್ಯ ಮಹಮ್ಮದ್ ರಫೀಕ್, ಮುಖಂಡರಾದ ಶಶಿ ಕುಮಾರ್, ಮಾಜಿ ಸದಸ್ಯ ಯೂಸುಫ್, ಕಂಡಕೆರೆಯ ಇಸ್ಮಾಯಿಲ್, ಅಲಿ ಉಸ್ತಾದ್, ಗಫೂರ್, ಮಂಜುನಾಥ್, ವಿನು, ಮುಂತಾದವರು ಪಾಲ್ಗೊಂಡಿದ್ದರು.