ಮಡಿಕೇರಿ, ಸೆ. 9: ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಕಾಲೂರು ಶ್ರೀ ಈಶ್ವರ ಅಯ್ಯಪ್ಪ ದೇವಾಲಯ ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡಿದ್ದು, ದೇವಾಲಯ ವನ್ನು ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಗೊಳಿಸಲಾಗುತ್ತಿದೆ. ನಾಡಿನ ಜನತೆ ದೇವಾಲಯದ ಅಭಿವೃದ್ಧಿಗೆ ಸಹಕರಿಸಬೇಕೆಂದು ಕಾಲೂರು ಶ್ರೀ ಈಶ್ವರ ಅಯ್ಯಪ್ಪ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಎ.ಟಿ. ಮಾದಪ್ಪ, ಕೊಡವ ಜಾನಪದ ಪರಂಪರೆಯ ಮೂಲಕ ಅಯ್ಯಪ್ಪ ದೇವಾಲಯದ ಆಚರಣೆಗಳನ್ನು ನಡೆಸುವ ಏಕೈಕ ದೇವಾಲಯ ಇದು ಎಂದು ಹೆಗ್ಗಳಿಕೆ ವ್ಯಕ್ತಪಡಿಸಿದರು. ಪುರಾತನ ಕಾಲದಲ್ಲಿ ಈ ಗ್ರಾಮದಲ್ಲಿ ವಾಸವಿದ್ದ ನಂದೆಟ್ಟಿರ, ಬಟ್ಟೀರ, ಚೋಳಚಂಡ, ಕೆಂಬಡತಂಡ, ಚೌರೀರ, ಕೊಂಗೀರ, ಪಾಂಡೀರ, ಬೊಮ್ಮಂಡ, ಮುಕ್ಕಾಟಿರ, ಹೆಮ್ಮಟೆಯಮ್ಮಂಡ ಮುಂತಾದ ಕುಟುಂಬಗಳ ಹೆಸರಿನಲ್ಲಿ ದೇವತಾ ಕಾರ್ಯಗಳು ನಡೆಯುತ್ತಿತ್ತು. ಈ ಕುಟುಂಬಗಳು ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ಮನವಿ ಮಾಡಿದರು. ಗ್ರಾಮಸ್ಥರಾದ ನಾಗೇಶ್ ಕಾಲೂರು ಮಾತನಾಡಿ, ಕಾಲೂರು ಶ್ರೀ ಈಶ್ವರ ಅಯ್ಯಪ್ಪ ದೇವಾಲಯದಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳಿನ 12 ಮತ್ತು 13 ರಂದು ಸಣ್ಣ ಹಬ್ಬ ಹಾಗೂ 15 ಮತ್ತು 16 ರಂದು ದೊಡ್ಡ ಹಬ್ಬ, ಬೊಳ್‍ಕಾಟ್ ಸೇವೆ ನಡೆಯುತ್ತದೆ ಎಂದರು. ಇಡೀ ಕೊಡಗಿನಲ್ಲಿ 12 ರೀತಿಯ ಕುಣಿತಗಳನ್ನು ಹೊಂದಿರುವ ಹಾಗೂ ದೀವಟಿಗೆಯನ್ನು ಕೈಯಲ್ಲಿ ಹಿಡಿದು ನರ್ತಿಸುವ ಪರಂಪರೆ ಇರುವ ಏಕೈಕ ದೇವಾಲಯ ಇದಾಗಿದೆ. ಇಲ್ಲಿನ ಎಲ್ಲಾ ಆಚರಣೆಗಳು ಕೊಡವ ಹಾಗೂ ಗೌಡ ಕುಟುಂಬಗಳ ನೇತೃತ್ವದಲ್ಲಿ ಶಿಸ್ತುಬದ್ಧ ರೀತಿಯಲ್ಲಿ ನಡೆಯುತ್ತದೆ ಎಂದು ನಾಗೇಶ್ ಕಾಲೂರು ಮಾಹಿತಿ ನೀಡಿದರು. ಹಿಂದೆ ಕೊಡಗಿನ ರಾಜರು ‘ಹತ್ತುನಾಡು ಕೊಟ್ಟರೂ ಮುತ್ತುನಾಡು ಕೊಡಲಾರೆವು’ ಎಂದು ಹೇಳಿದ ಪ್ರತೀತಿ ಇದೆ. ಸುಮಾರು 200 ವರ್ಷಗಳ ಹಿಂದೆ ಕೊಡಗಿಗೆ ಬರಗಾಲ ಬಂದಿದ್ದಾಗ ಇಂದು ಕಾಲೂರು ಎಂದು ಕರೆಯಲ್ಪಡುತ್ತಿರುವ ಮುತ್ತುನಾಡು ಪ್ರದೇಶದಿಂದ ಭತ್ತದ ಬೀಜವನ್ನು ಹಂಚಲಾಯಿತು. ಇದೇ ಕಾರಣಕ್ಕೆ ಈ ಊರಿಗೆ ಕಾಳೂರು ಎನ್ನುವ ಹೆಸರು ಬಂತು. ಇದೇ ಹೆಸರು ಕ್ರಮೇಣ ಕಾಲೂರು ಆಯಿತು ಎಂದು ನಾಗೇಶ್ ವಿವರಿಸಿದರು. ನೀಡವಟ್ಟು ಭದ್ರಕಾಳಿ ದೇವಾಲಯ ಮತ್ತು ಬಾರಿಬೊಳ್ಳಚ್ಚಿ ಪೊವ್ವದಿ ದೇವಾಲಯ ಈಗಾಗಲೇ ಜೀರ್ಣೋದ್ಧಾರ ಹೊಂದಿದ್ದು, ಇದೀಗ ಅಂದಾಜು ರೂ. 1 ಕೋಟಿ ವೆಚ್ಚದಲ್ಲಿ ಕಾಲೂರು ಶ್ರೀ ಈಶ್ವರ ಅಯ್ಯಪ್ಪ ದೇವಾಲಯದ ಜೀರ್ಣೋ ದ್ಧಾರಕ್ಕೆ ಗ್ರಾಮಸ್ಥರ ನೇತೃತ್ವದಲ್ಲಿ ಸಂಕಲ್ಪ ಮಾಡಲಾಗಿದೆ ಎಂದರು. ಭಕ್ತರಿಂದ ಹಣ ಸಂಗ್ರಹ ಮಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ನಾಗೇಶ್ ಕಾಲೂರು ತಿಳಿಸಿದರು. ದಾನಿಗಳು ಖಾತೆ ಸಂಖ್ಯೆ 85029299517, ಕಾವೇರಿ ಗ್ರಾಮೀಣ ಬ್ಯಾಂಕ್ ಮಡಿಕೇರಿ ಶಾಖೆ, ಕೊಡಗು ಜಿಲ್ಲೆ IಈSಅ ಅoಜe: Sಃಒ ಙಔಖಖಅ ಏಉಃ ಗೆ ಹಣವನ್ನು ಜಮಾ ಮಾಡ ಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 94802 38669 ನ್ನು ಸಂಪರ್ಕಿಸಬಹುದಾಗಿದೆ.ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಪೊನ್ನಪ್ಪ, ಪೂನ್ನಚೆಟ್ಟಿರ ಮಂದಣ್ಣ, ಕೆ.ಕೆ. ದೇವಯ್ಯ ಉಪಸ್ಥಿತರಿದ್ದರು.