ಮಡಿಕೇರಿ, ಸೆ. 9: ಈ ವರ್ಷದಲ್ಲಿ ಕಾಫಿ ಬೆಳೆಯುವ ಬಹುತೇಕ ಪ್ರದೇಶದಲ್ಲಿ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಚದುರಿದ ಮಳೆ ಮತ್ತು ಪ್ರಕರವಾದ ಬೆಳಕಿನ ವಾತಾವರಣವಿದ್ದಾಗ ಕೀಟಗಳ ಹಾರಾಟ ಕಾಲ ಮುಂಚಿತವಾಗಿಯೇ ಚುರುಕಾಗುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಕಾಫಿ ಕಾಂಡ ಕೊರಕದ ಪ್ರೌಢ ಕೀಟಗಳು ಚಳಿಗಾಲದ ಅಕ್ಟೋಬರ್‍ನಿಂದ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗಿ ಹೊರಹೊಮ್ಮುವದು ಕಂಡು ಬರುತ್ತದೆ. ಈ ದೀರ್ಘಾವಧಿಯಲ್ಲಿ ಕಾಂಡ ಕೊರಕದ ಆಕ್ರಮಣದ ಹೊಸ ಚಕ್ರವನ್ನು ಶುರುಮಾಡುವದರಿಂದ ಈ ಕಾಲಘಟ್ಟವು ನಿರ್ಣಾಯಕವಾಗಿರುತ್ತದೆ.

ಆದುದರಿಂದ ಒಂದು ವೇಳೆ ಈ ಕಾಲದಲ್ಲಿ ಎಲ್ಲಾ ಅರೇಬಿಕಾ ಕಾಫಿ ಬೆಳೆಗಾರರು ಸಮಯ ಪ್ರಜ್ಞೆಯಿಂದ ಸೂಕ್ತವಾದ ಹತೋಟಿ ಕ್ರಮಗಳನ್ನು ಅನುಸರಿಸಿದರೆ ಕೀಟದ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಲು ಸಹಾಯಕವಾಗುತ್ತದೆ.

ಹತೋಟಿ ಕ್ರಮಗಳು: ಇಡೀ ತೋಟದಲ್ಲಿ ಸೆಪ್ಟೆಂಬರ್ ತಿಂಗಳೊಳಗಾಗಿ ಕೀಟ ಪೀಡಿತ ಗಿಡಗಳನ್ನು ಹುಡುಕಿ, ಕಿತ್ತು ನಾಶ ಮಾಡಬೇಕು. (ಸುಟ್ಟು ಹಾಕಬೇಕು ಅಥವಾ ಹತ್ತು ದಿನಗಳು ನೀರಿನಲ್ಲಿ ಮುಳುಗಿಸಬೇಕು). ಹುಡುಕುವಾಗ, ಕೀಟಬಾಧಿತ ಗಿಡಗಳಲ್ಲಿ ಹೆಚ್ಚಿನ ಫಸಲು ಇದ್ದರೆ, ಅಂತಹ ಗಿಡಗಳನ್ನು ಬುಡ ಸಹಿತ ಕಿತ್ತು ಹಾಕುವ ಬದಲು ಪ್ರಧಾನ ಕಾಂಡ ಹಾಗೂ ದಪ್ಪ ರೆಂಬೆಗಳನ್ನು ಗೋಣಿ ಚೀಲದ ಪಟ್ಟಿಯಿಂದ ಸುರುಳಿ ಸುರುಳಿಯಾಗಿ ಜಾಗ ಬಿಡದಂತೆ ಸುತ್ತಬೇಕು.

ಅಂತಹ ಗೋಣಿ ಚೀಲ ಸುತ್ತಿದ ಕೀಟಬಾಧಿತ ಗಿಡಗಳಿಗೆ ಕ್ಲೋರೋಫೈರಿಫಾಸ್ 50 ಇಸಿ ಮತ್ತು ಸೈಪರ ಮೈತ್ರಿನ್ 5 ಇಸಿ ಹೊಂದಿರುವ ಕೀಟನಾಶಕವನ್ನು 200 ಲೀ. ನೀರಿಗೆ 240 ಮಿ.ಲೀ. ಪ್ರಮಾಣದಲ್ಲಿ 200 ಮಿ.ಲೀ. ಅಂಟು ದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು.

ಕಡಿಮೆ ನೆರಳು ಇರುವ ತಾಕುಗಳಲ್ಲಿ ಆರೋಗ್ಯವಾದ ಗಿಡಗಳಿಗೆ ಶೇ. 10 ಸುಣ್ಣದ ದ್ರಾವಣವನ್ನು (200 ಲೀ. ನೀರಿಗೆ 20 ಕೆ.ಜಿ. ಸಿಂಪರಣೆ ಸುಣ್ಣ ಮತ್ತು 200 ಮಿ.ಲೀ. ಫೆವೀಕಾಲ್ ಡಿ.ಡಿ.ಎಲ್. ಬೆರೆಸಿ) ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳಿಗೆ ಹಚ್ಚಬೇಕು.

ಆರೋಗ್ಯಕರವಾದ ಗಿಡಗಳನ್ನು ಸಂರಕ್ಷಣೆ ಮಾಡಲು 600 ಮಿ.ಲೀ. ಕ್ಲೋರೋಫೈರಿಫಾಸ್ 20 ಇಸಿ ಕೀಟನಾಶಕ ಮತ್ತು 200 ಮಿ.ಲೀ. ಅಂಟು ದ್ರಾವಣವನ್ನು 200 ಲೀ. ನೀರಿಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳು ಸಂಪೂರ್ಣವಾಗಿ ತೊಯ್ಯುವಂತೆ ಸಿಂಪಡಿಸಬೇಕು.

ಕೀಟನಾಶಕ ಸಿಂಪರಣೆಯ ನಂತರ ತಕ್ಷಣವೇ ಮಳೆ ಬಂದಲ್ಲಿ, ಎರಡು ವಾರದೊಳಗಾಗಿ ಮತ್ತೆ ಮರು ಸಿಂಪರಣೆ ಮಾಡಬೇಕು. ಫೆರಮೋನ್ ಟ್ರ್ಯಾಪ್‍ಗಳನ್ನು ಎಕರೆಗೆ 10 ರಂತೆ ತೋಟಗಳಲ್ಲಿ ಅಳವಡಿಸಿಕೊಂಡು ಬಿಳಿ ಕಾಂಡ ಕೊರಕದ ಹಾವಳಿಯನ್ನು ನಿಯಂತ್ರಿಸಬಹುದು ಎಂದು ಮಡಿಕೇರಿ ಕಾಫಿ ಮಂಡಳಿ ಉಪ ನಿರ್ದೇಶಕರು ತಿಳಿಸಿದ್ದಾರೆ.