ಸೋಮವಾರಪೇಟೆ, ಸೆ. 9: ನ್ಯಾಯಬೆಲೆ ಅಂಗಡಿಯಿಂದ ಪಡಿತರ ಹೊಂದಿಕೊಳ್ಳಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹೆಬ್ಬೆಟ್ಟಿನ ಗುರುತು ನೀಡಬೇಕಾಗಿದ್ದು, ಇದರಿಂದಾಗಿ ಪಂಚಾಯಿತಿಯ ಇತರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಪಡಿತರ ವ್ಯವಸ್ಥೆಗೆ ಸಂಬಂಧಿಸಿದಂತೆ ಎಲ್ಲಾ ಕೆಲಸಗಳನ್ನೂ ನ್ಯಾಯಬೆಲೆ ಅಂಗಡಿಗೆ ವರ್ಗಾಯಿಸಬೇಕೆಂದು ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ಧರ್ಮಾಚಾರಿ ಅವರು ಆಗ್ರಹಿಸಿದರು.

ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಧರ್ಮಾಚಾರಿ ಅವರ ಅಧ್ಯಕ್ಷತೆಯಲ್ಲಿ ಅಲ್ಲಿನ ನವದುರ್ಗ ಪರಮೇಶ್ವರಿ ಸಮುದಾಯ ಭವನದಲ್ಲಿ ನಡೆಯಿತು. ಪಂಚಾಯಿತಿ ಸಿಬ್ಬಂದಿಗಳಿಗೆ ಕಚೇರಿ ಕೆಲಸದೊಂದಿಗೆ ಹೆಚ್ಚುವರಿಯಾಗಿ ಪಡಿತರ ಸಂಬಂಧಿತ ಕೆಲಸಗಳನ್ನು ಹಂಚಲಾಗಿದ್ದು, ಇದರಿಂದ ಪಂಚಾಯಿತಿ ಕೆಲಸಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂದರು.

ದಿನಂಪ್ರತಿ ನೂರಾರು ರೋಗಿಗಳು ಆಗಮಿಸುತ್ತಿರುವ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರದ ಎಲ್ಲಾ ದಿನವೂ ವೈದ್ಯರು ಲಭ್ಯವಿರುವಂತೆ ಒತ್ತಾಯಿಸಿ ಜಿಲ್ಲಾ ಆರೋಗ್ಯಾಧಿ ಕಾರಿಗಳಿಗೆ ಪತ್ರ ಬರೆಯಬೇಕೆಂದು ಎಸ್.ಬಿ. ಭರತ್‍ಕುಮಾರ್ ಸಭೆಯಲ್ಲಿ ತಿಳಿಸಿದರು.

ಜನರ ಮನೋಸ್ಥಿತಿ ಬದಲಾಗದ ಹಿನ್ನೆಲೆ ಎಲ್ಲೆಡೆ ಕುಡಿಯುವ ನೀರು ಪೋಲಾಗುತ್ತಿದ್ದು, ಇದನ್ನು ತಡೆಹಿಡಿಯಲು ಪ್ರತಿ ಮನೆಗೆ ಮೀಟರ್ ಅಳವಡಿಸುವಂತೆ ಬಸವನಕೊಪ್ಪ ಗ್ರಾಮದ ಮಹೇಂದ್ರ ಅವರು ಸಭೆಯಲ್ಲಿ ಒತ್ತಾಯಿಸಿದರು.

ಕೂಗೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಯನ್ನು ಕೂಡಲೇ ಭರ್ತಿ ಮಾಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂದು ಕೂಗೂರು ನಾಗರಾಜು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಪಟ್ಟಂತೆ ಜಂಟಿಖಾತೆ ಹೊಂದಿರುವ ಕೂಲಿ ಕಾರ್ಮಿಕರು ಪ್ರತ್ಯೇಕ ಖಾತೆ ತೆರೆದು ಖಾತೆ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಪಂಚಾಯಿತಿಗೆ ನೀಡಬೇಕು ಎಂದು ಪಿಡಿಒ ಎಸ್.ಪಿ.ಲಿಖಿತ ಮನವಿ ಮಾಡಿದರು.

ಸಭೆಯಲ್ಲಿ ತಾ.ಪಂ.ಸದಸ್ಯೆ ಕುಸುಮ ಅಶ್ವತ್, ನೋಡೆಲ್ ಅಧಿಕಾರಿ ಶ್ರೀದೇವ್, ಗ್ರಾ.ಪಂ.ಸದಸ್ಯರಾದ ಎಂ.ಡಿ.ಹರೀಶ್, ಎಚ್.ಎಂ.ಜಿತೇಂದ್ರ, ಎಸ್.ಎನ್.ಪೃಥ್ವಿ, ಟಿ.ಟಿ.ಹೇಮಂತ್, ಸವಿತ, ಪ್ರೇಮ,ಶಿವಮ್ಮ ಮತ್ತಿತರರು ಇದ್ದರು. ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.