ಶ್ರೀಮಂಗಲ, ಸೆ. 8: ಪೊನ್ನಂಪೇಟೆ ಎಪಿಸಿಎಂಪಿಎಸ್ ಸಂಘವು 2016-17ನೇ ಸಾಲಿನಲ್ಲಿ 91 ಕೋಟಿ ರೂ.ಗಳ ವ್ಯಾಪಾರ ವಹಿವಾಟನ್ನು ನಡೆಸಿ 23 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಿದೆ. ಈ ಬಾರಿ ಸದಸ್ಯರಿಗೆ ಶೇ. 25ರಷ್ಟು ಡಿವಿಡೆಂಡ್‍ನ್ನು ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ ತಿಳಿಸಿದ್ದಾರೆ.

ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ದ. ಕೊಡಗಿನ 23 ಗ್ರಾಮಗಳನ್ನು ಹೊಂದಿರುವ ಈ ಸಂಸ್ಥೆ ಜಿಲ್ಲೆಯಲ್ಲೇ ದೊಡ್ಡ ಸಂಸ್ಥೆಯಾಗಿದೆ. ಒಟ್ಟು 2418 ಸದಸ್ಯರನ್ನು ಹೊಂದಿದ್ದು, ಒಟ್ಟು ಪಾಲು ಹಣ 38,17,220 ಇರುತ್ತದೆ. ಇದರಲ್ಲಿ ಸರಕಾರದ ಪಾಲು 67 ಸಾವಿರವಿದ್ದು, ಸದಸ್ಯತನದ ಪ್ರಗತಿಯು ಕಳೆದ ಸಾಲಿಗಿಂತ ಶೇ. 19.64 ರಷ್ಟು ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಉಪಯೋಗ ವಾಗುವಂತಹ ನಿಟ್ಟಿನಲ್ಲಿ ಕಾಫಿ ಔಟರ್ನ್ ಉಪಕರಣವನ್ನು ಅಳವಡಿಸ ಲಾಗಿದೆ. ಇದರೊಂದಿಗೆ ಕಾಫಿ ಹಲ್ಲಿಂಗ್ ಮತ್ತು ಸಾವಿರ ಟನ್ ಸಾಂದ್ರತೆಯ ಗೋದಾಮನ್ನು ನಿರ್ಮಿಸÀಲಾಗಿದೆ. ಇಲ್ಲಿ ರೈತರು ಬೆಳೆದ ಕಾಫಿ, ಕಾಳುಮೆಣಸು, ಭತ್ತವನ್ನು ದಾಸ್ತಾನು ಮಾಡಬಹುದು. ದಾಸ್ತಾನು ಮಾಡಿದ ರೈತರಿಗೆ ಅಧಿಕ ಮುಂಗಡ ಹಣವನ್ನು ನೀಡುವÀ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಉತ್ತಮ ಗುಣಮಟ್ಟದ ಹಾಗೂ ಮಾರುಕಟ್ಟೆ ದರದಲ್ಲಿ ರಸಗೊಬ್ಬರ, ಬೇವಿನ ಹಿಂಡಿ, ಕೃಷಿ ಹತ್ಯಾರುಗಳನ್ನು ವಿತರಣೆ ಮಾಡಲಾಗುತ್ತಿದ್ದು, ಈ ಭಾಗದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯು ಇಂಡಿಯನ್ ಪೆಟ್ರೋಲ್ ಬಂಕ್‍ನ್ನು ಒಳಗೊಂಡಿದ್ದು, ಇದರ ಮುಖಾಂತರ ಗುಣಮಟ್ಟದ ಇಂಧನ ಹಾಗೂ ಆಯಿಲ್‍ನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಕೋವಿ ಲೈಸನ್ಸ್ ದಾರರಿಗೆ ಮದ್ದುಗುಂಡುಗಳ ಸರಬರಾಜು ಮಾಡಲಾಗುತ್ತಿದೆ. ಭವಿಷ್ಯದಲ್ಲಿ ಸಂಘದ ವತಿಯಿಂದ ಯಾವದಾದರೂ ನೂತನ ಕೈಗಾರಿಕೆಯನ್ನು ನಡೆಸುವ ಉದ್ದೇಶದಿಂದ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ 200ಕೆವಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಸಂಘದ ಈ ಎಲ್ಲಾ ಬೆಳವಣಿಗೆ ಹಾಗೂ ಪ್ರಗತಿಯನ್ನು ಪರಿಗಣಿಸಿ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಮಾಡಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನವನ್ನು ನಮ್ಮ ಸಂಸ್ಥೆ ಪಡೆದುಕೊಂಡಿದೆ ಎಂದು ಅವರು ತಿಳಿಸಿದರು.

ಮರಣ ನಿಧಿಯಲ್ಲಿ ಒಟ್ಟು 1587 ಸದಸ್ಯರಿದ್ದು, ಇದಕ್ಕೆ 110 ಹೊಸ ಸೇರ್ಪಡೆಯಾಗಿದೆ. ಇದರಲ್ಲಿ 11 ಜನ ದಿವಂಗತರಾಗಿದ್ದು, ವರ್ಷಾಂತ್ಯಕ್ಕೆ 1686 ಸದಸ್ಯರು ಇದ್ದಾರೆ. ಮರಣ ನಿಧಿಯ ಒಟ್ಟು ಮೊತ್ತ 1,58,35,145 ಇದೆ. ನಿರಖು ಠೇವಣಿ 1,52,63,577 ಸಂಗ್ರಹವಾಗಿದ್ದು ಇದರಲ್ಲಿ 64,95,117 ಮರುಪಾವತಿಯಾಗಿದೆ. 1,51,93,577 ಸಾಲ ಖೈರಿಗೆ ಠೇವಣಿ ಇರುತ್ತದೆ. ಠೇವಣಿಗೆ ಶೇ. 8.5 ದರದಲ್ಲಿ ಬಡ್ಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾ. 16ರಂದು ಬೆಳಿಗ್ಗೆ 10.30 ಗಂಟೆಗೆ ಪೊನ್ನಂಪೇಟೆಯ ಸಂಸ್ಥೆಯ ಕಚೇರಿ ಸಭಾಂಗಣದಲ್ಲಿ ವಾರ್ಷಿಕ ಮಹಾಸಭೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಎಂ. ಸರಚಂಗಪ್ಪ, ನಿರ್ದೇಶಕರುಗಳಾದ ಎಂ.ಎಂ. ಸೋಮಯ್ಯ, ಎ.ಕೆ. ಜನಾರ್ಧನ, ಕೆ. ದಯಾಚಂಗಪ್ಪ, ಕೆ.ಬಿ. ನಾಣಯ್ಯ, ಪಿ.ಪಿ. ಪವನ್, ಎಂ.ಕೆ. ಸೋಮಯ್ಯ, ಸಿ. ಆಶಾ ಪ್ರಕಾಶ್. ಬಿ.ಎಸ್. ಧಶಮಿ ದೇಚಮ್ಮ, ಪಿ.ಕೆ. ಗಿರೀಶ್, ಹೆಚ್.ಎಸ್. ತಮ್ಮಯ್ಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಪೂನಂ ಉಪಸ್ಥಿತರಿದ್ದರು.