ಮಡಿಕೇರಿ, ಸೆ. 8: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆ ಸಂದರ್ಭ ನೀಡಿದ ಭರವಸೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿದೆ.
ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ 27.02.2017 ರಂದು ಕೇಂದ್ರ ಸರಕಾರ ಹೊರಡಿ ಸಿರುವ ಕರಡು ಅಧಿಸೂಚನೆ ಯನ್ನು ಹಿಂಪಡೆಯಬೇಕು. ಕಸ್ತೂರಿರಂಗನ್ ಸಮಿತಿಯ ವರದಿಯನ್ನು ತಿರಸ್ಕರಿಸ ಬೇಕು ಮತ್ತು ಜನಪರ ಸಂಘಟನೆಗಳು ಮತ್ತು ತಜ್ಞರನ್ನೊಳಗೊಂಡ ಸಮಿತಿ ಯೊಂದನ್ನು ಅಧ್ಯಯನಕ್ಕಾಗಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.
ನಾಗರಹೊಳೆ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಘೋಷಿಸಲು ಪ್ರಕಟಿಸಿರುವ ಕರಡು ಅಧಿಸೂಚನೆಯನ್ನು ಹಿಂಪಡೆಯ ಬೇಕು. ಮೂರು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರು ವದನ್ನು ರದ್ದುಮಾಡಬೇಕು. ಕರಿಮೆಣಸು ಆಮದು ಮಾಡಲು ಅವಕಾಶ ಕೊಟ್ಟಿರುವದು ಕೊಡಗಿನ ಬೆಳೆಗಾರರ ಹಿತಾಸಕ್ತಿಗೆ ಮಾರಕವಾಗಿರುವದರಿಂದ ಆಮದನ್ನು ರದ್ದುಮಾಡಲು ಕ್ರಮ ತೆಗೆದುಕೊಳ್ಳಬೇಕು. ರೈತರ ಎಲ್ಲಾ ಸಾಲವನ್ನು ರದ್ದುಮಾಡಬೇಕು. ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟಿನ ಬೆಲೆ ನಿಗದಿ ಮಾಡಬೇಕು. ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ನಿರ್ಮಿಸುವದಾಗಿ ಕೊಟ್ಟ ಭರವಸೆಯನ್ನು ಈಡೇರಿಸ ಬೇಕು. ಸಾರ್ವಜನಿಕ ವಲಯದಲ್ಲಿರುವ ಉದ್ಯಮ ಮತ್ತು ಸೇವೆಗಳನ್ನು ಖಾಸಗೀಕರಿಸುವದನ್ನು ನಿಲ್ಲಿಸಬೇಕು. ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಮಾಡುವದಾಗಿ ಕೊಟ್ಟ ಭರವಸೆಯನ್ನು ಅನುಷ್ಠಾನಕ್ಕೆ ತರಬೇಕು. ಗೋ ರಕ್ಷಕ ಸಮಿತಿಗಳು ಮತ್ತು ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿರುವ ಖಾಸಗಿ ಪಡೆಗಳನ್ನು ನಿಷೇಧಿಸಬೇಕು. ಜಾನುವಾರು ಮಾರಾಟ ನಿಷೇಧ ಅಧಿಸೂಚನೆಯನ್ನು ಹಿಂಪಡೆಯ ಬೇಕು. ಜಿ.ಎಸ್.ಟಿ. ಮೂಲಕ ಜನರ ಮೇಲೆ ಹೇರಿರುವ ಹೊರೆಯನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಿಪಿಐ (ಎಂ) ಕಾರ್ಯದರ್ಶಿ ದುರ್ಗಾಪ್ರಸಾದ್, ಪ್ರಮುಖರಾದ ಪಿ.ಆರ್. ಭರತ್, ರಮೇಶ್ ಹಾಗೂ ಇನ್ನಿತರರು ಇದ್ದರು.