ಗೋಣಿಕೊಪ್ಪಲು, ಸೆ. 8: ಹುಲಿ ಧಾಳಿ ನಡೆಸಿ ಹಸುವನ್ನು ಕೊಂದು ಹಾಕಿರುವ ಘಟನೆ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಅಜ್ಜಿಕುಟ್ಟೀರ ಮೊಣ್ಣಪ್ಪ ಎಂಬವರಿಗೆ ಸೇರಿದ ಹುಸುವನ್ನು ಗದ್ದೆಯಲ್ಲಿ ಕಟ್ಟಿ ಹಾಕಿದ್ದರು. ಈ ಸಂದರ್ಭ ಧಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು ಹಾಕಿದೆ. ಗ್ರಾಮಸ್ಥರ ಎದುರೇ ಘಟನೆ ನಡೆದಿದ್ದು, ಜನರನ್ನು ಕಂಡು ಹುಲಿ ಹಸುವನ್ನು ಬಿಟ್ಟು ಸಮೀಪದ ಕಾಡಿನಲ್ಲಿ ಸೇರಿಕೊಂಡಿದೆ. ಹಾಲು ಕರೆಯುವ ಹಸುವಿನ ಸಾವಿನಿಂದಾಗಿ ಕರು ತಾಯಿ ಇಲ್ಲದಂತಾಗಿದೆ.ಹಲವು ತಿಂಗಳುಗಳಿಂದ ಹುಲಿ ಗ್ರಾಮದಲ್ಲಿ ಸೇರಿಕೊಂಡಿದ್ದು, ಗ್ರಾಮಸ್ಥರು ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ.
ಹುಲಿ ಪ್ರತ್ಯಕ್ಷ; ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾರ್ಮಿಕರ ಮೇಲೆರಗಲು ಬಂದ ಹುಲಿಯಿಂದ ಕಾರ್ಮಿಕರು ತಪ್ಪಿಸಿಕೊಂಡಿರುವ ಘಟನೆ ದೇವನೂರು ಗ್ರಾಮದಲ್ಲಿ ನಡೆದಿದೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ಅಲ್ಲಿನ ತಾರಾ ಅಯ್ಯಮ್ಮ ಎಂಬವರ ತಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಸಮೀಪವಿದ್ದ ಹುಲಿ ಕಾರ್ಮಿಕರ ಮೇಲೆ ಧಾಳಿ ನಡೆಸಲು ಮುಂದಾಗಿದೆ. ಈ ಸಂದರ್ಭ ಹೆದರಿ ಕಾರ್ಮಿಕರು ಕಿರುಚಿಕೊಂಡ ಪರಿಣಾಮ ಹುಲಿ ಘರ್ಜಿಸುತ್ತಾ ಸಮೀಪದ ಕಾಡಿಗೆ ಓಡಿ ಹೋಗಿದೆ. ಕಾರ್ಮಿಕರು ಭಯಬೀತರಾಗಿ ಮನೆಯತ್ತ ಓಡಿ ಬಂದಿದ್ದಾರೆ.
ಈ ಬಗ್ಗೆ ತಿತಿಮತಿ ಅರಣ್ಯ ಇಲಾಖೆಗೆ ತೋಟದ ಮಾಲೀಕರಾದ ತಾರಾ ಅಯ್ಯಮ್ಮ ದೂರು ನಿಡಿದ್ದು. ಆರ್‍ಆರ್‍ಟಿ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಹುಲಿಯ ಚಲನ ವಲನ ಅರಿಯಲು ಕಾರ್ಯಾಚರಣೆ ನಡೆಸುವ ಸಿದ್ಧತೆಯಲ್ಲಿ ತೊಡಗಿದೆ.
(ಮೊದಲ ಪುಟದಿಂದ)
ಆಡು ಬಲಿ
ಶ್ರೀಮಂಗಲ : ಪೊನ್ನಂಪೇಟೆ ಸಮೀಪದÀ ಚಿಕ್ಕಮುಂಡೂರು ಗ್ರಾಮದಲ್ಲಿ ಹುಲಿ ಧಾಳಿಮಾಡಿ ಎರಡು ಆಡನ್ನು ಕೊಂದು ಹಾಕಿದ್ದು, ಇದರಲ್ಲಿ ಒಂದು ಆಡನ್ನು ತಿಂದು ಹಾಕಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಭಯಭೀತರಾಗಿದ್ದು ಕೂಡಲೇ ಅರಣ್ಯ ಇಲಾಖೆ ಹುಲಿಯನ್ನು ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿಕ್ಕಮುಂಡೂರು ಗ್ರಾಮದ ನಿವೃತ್ತ ಪೋಸ್ಟ್‍ಮಾಸ್ಟರ್ ಕಳ್ಳಿಚಂಡ ಜಗದೀಶ್ ರವರ ಕೊಟ್ಟ್ಟಿಗೆಗೆ ತಾ. 7ರ ರಾತ್ರಿ ಹುಲಿ ಧಾಳಿಮಾಡಿ ಆಡುಗಳ ಮೇಲೆ ಧಾಳಿ ಮಾಡಿದೆ. ಇದುವರೆಗೆ ಶ್ರೀಮಂಗಲ, ಕುಟ್ಟ, ಬಾಳೆಲೆ, ಬೆಕ್ಕೆಸೊಡ್ಲೂರು ಮುಂತಾದ ಅರಣ್ಯಕ್ಕೆ ಹತ್ತಿರವಿರುವ ಗ್ರಾಮಗಳಲ್ಲಿ ಹುಲಿ ಧಾಳಿ ಮಾಡಿದ ವರದಿ ಇದೆ. ಆದರೆ, ಈಗ ಗ್ರಾಮಗಳಿಗೆ ಹುಲಿಗಳು ಧಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕಾಗಿದೆ. ಸಾರ್ವ ಜನಿಕರಿಗೆ ರಕ್ಷಣೆ ನೀಡಬೇಕಾಗಿದೆ ಎಂದು ಚಿಕ್ಕಮುಂಡೂರು ಧವಸ ಭಂಡಾರದ ಅಧ್ಯಕ್ಷರಾದ ಮುಂಡುಮಾಡ ಗಣೇಶ್ ಮಾದಪ್ಪ ಒತ್ತಾಯಿಸಿದ್ದಾರೆ.