ಮಡಿಕೇರಿ, ಸೆ. 8: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕಸಬ ವೃತ್ತ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನಗರದ ಸ್ತ್ರೀ ಶಕ್ತಿ ಭವನದಲ್ಲಿ ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪಿನವರು ವಿವಿಧ ರೀತಿಯ ಪೌಷ್ಟಿಕಾಂಶಯುಕ್ತ ಆಹಾರವನ್ನು ತಯಾರಿಸಿ ತಮ್ಮ ಆಹಾರದಲ್ಲಿರುವ ಪೌಷ್ಟಿಕಾಂಶ ಮತ್ತು ವಿಧಾನವನ್ನು ವಿವರಿಸಿದರು.
ಡಾ. ಪೂಜಾ ಮಾತನಾಡಿ, ದಿನನಿತ್ಯ ಬಳಸುವ ಆಹಾರದಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ವಿವರವಾಗಿ ತಿಳಿಸಿದರು. ಪೌಷ್ಟಿಕ ಆಹಾರದಿಂದಾಗುವ ಅನುಕೂಲಗಳು ಹಾಗೂ ಅಪೌಷ್ಟಿಕತೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎ.ಎಂ. ದಮಯಂತಿ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಜ್ಞಾನ ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು. ಆರೋಗ್ಯವಂತ ಮಾನವಾಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತ ಕೀರ್ತನ್ ಮಾತನಾಡಿ, ಆಹಾರದಲ್ಲಿ ಬದಲಾವಣೆಗಳನ್ನು ತರಲು ಮಹಿಳೆಯರು ಪ್ರಯತ್ನಿಸಬೇಕು. ಸ್ಥಳೀಯವಾಗಿ ಸಿಗುವ, ತಾವೇ ಬೆಳೆದ ಆಹಾರದಲ್ಲಿ ಮಕ್ಕಳನ್ನು ಆಕರ್ಷಿಸುವ ಹಾಗೆ ಆಹಾರವನ್ನು ತಯಾರಿಸಬೇಕು. ಮಕ್ಕಳು ವಯಸ್ಸಿಗೆ ತಕ್ಕ ತೂಕ ಹೆಚ್ಚಿದಲ್ಲಿ ಆರೋಗ್ಯ ಹೆಚ್ಚಾದಂತೆ. ಅದೇ ಮಾದರಿಯಲ್ಲಿ ನೀಡಿದ ಮಾಹಿತಿಗಳನ್ನು ಬಳಸಿ ಪೌಷ್ಟಿಕ ಆಹಾರವನ್ನು ತಯಾರಿಸಿ, ತಮ್ಮ ಹಾಗೂ ಕುಟುಂಬದಲ್ಲಿನ ಇತರರ ಆರೋಗ್ಯ ವೃದ್ಧಿಸಲು ಸಹಕಾರಿಯಾಗುವ ವಾತಾವರಣ ಸೃಷ್ಟಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರಾದ ಶೋಭಾ, ವಾಣಿ, ಶೈಲ, ಚಂದ್ರಾವತಿ, ಶೋಭ, ಜ್ಯೋತಿ, ಕಸಬ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು ಹಾಗೂ ಸ್ತ್ರೀ ಶಕ್ತಿ ಗುಂಪಿನವರು ಭಾಗವಹಿಸಿದ್ದರು.