ವೀರಾಜಪೇಟೆ, ಸೆ. 8: ವೀರಾಜ ಪೇಟೆ ಪಟ್ಟಣ ಪಂಚಾಯಿತಿಯು ಪೆರುಂಬಾಡಿಯ ಜನ ವಸತಿ ಪ್ರದೇಶದಲ್ಲಿ ನಿರಂತರವಾಗಿ ಕಸ ಹಾಕುತ್ತಿರುವದರಿಂದ ಈಗ 18 ತಿಂಗಳುಗಳಿಂದ ರೋಗ ರುಜಿನಗಳಿಂದ ಸುಮಾರು 17 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದು ಇನ್ನು ಕೆಲವು ಗ್ರಾಮಸ್ಥರು ಕಾಯಿಲೆಯಿಂದ ನರಳುತ್ತಿದ್ದಾರೆ. ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಆರ್ಜಿ ಗ್ರಾಮ ಪಂಚಾಯಿತಿ ಹಾಗೂ ಪೆರುಂಬಾಡಿ ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯಾಗಿದೆ. ಕಸ ವಿಲೇವಾರಿ ಸ್ಥಗಿತಗೊಳಿಸುವವರೆಗೂ ಪೆರುಂಬಾಡಿಯಲ್ಲಿ ಗ್ರಾಮಸ್ಥರು ಕಸ ವಿಲೇವಾರಿಯನ್ನು ತಡೆದು ಅನಿರ್ಧಿಷ್ಟಾವಧಿಯವರೆಗೆ ಮುಷ್ಕರ ಹೂಡಲಾಗುವದು ಎಂದು ಗ್ರಾಮಸ್ಥರ ಪರವಾಗಿ ಬಿ.ಬಿ. ಚುಪ್ಪ ನಾಗರಾಜ್ ತಿಳಿಸಿದರು. ಪೆರುಂಬಾಡಿಯಲ್ಲಿ ಕಸವಿಲೇವಾರಿ ವಿರುದ್ಧ ಸಾರ್ವಜನಿಕ ಪ್ರತಿಭಟನೆ ಸಂದರ್ಭ ಅವರು ಮಾತನಾಡಿದರು.

ಕಸ ವಿಲೇವಾರಿಯ ಹದಗೆಟ್ಟ ವಾತಾವರಣ, ದುರ್ನಾತದಿಂದಾಗಿ ಪೆರುಂಬಾಡಿಯ ಕಸವಿಲೇವಾರಿ ಕೇಂದ್ರದ ನಿವಾಸಿಗಳಿಗೆ ಅಲ್ಲದೆ ಪೆರುಂಬಾಡಿಯ ಸುಮಾರು 300 ಕುಟುಂಬಗಳಿಗೆ ಆರೋಗ್ಯ ಸಮಸ್ಯೆಯಾಗಿದೆ. ಈ ಸಂಬಂಧದಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಅನೇಕ ಬಾರಿ ದೂರು ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ. ಎರಡು ದಿನಗಳ ಹಿಂದೆ ಕಸ ವಿಲೇವಾರಿ ಕೇಂದ್ರದ ಬಳಿಯ ನಿವಾಸಿ ಪೊನ್ನು (55) ಎಂಬಾತನ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈ ಕಸ ವಿಲೇವಾರಿ ಕೇಂದ್ರಕ್ಕೆ ಸಿದ್ದಾಪುರ, ಬಿಟ್ಟಂಗಾಲದಿಂದಲೂ ಹಾಗೂ ಕೇರಳದ ಕಸಾಯಿ ಖಾನೆಯ ದನಗಳ ತ್ಯಾಜ್ಯ, ಕೋಳಿ ತ್ಯಾಜ್ಯ ದಿನಂಪ್ರತಿ ಬರುತ್ತಿದೆ. ಕೇರಳದ ದನ ಹಾಗೂ ಕೋಳಿ ಕಸಾಯಿ ಖಾನೆಗಳ ವರ್ತಕರಿಂದ ಇಲ್ಲಿನ ಪಟ್ಟಣ ಪಂಚಾಯಿತಿಯ ಕೆಲವರು ಪರೋಕ್ಷವಾಗಿ ಲಾಭ ಪಡೆಯುತ್ತಿದ್ದಾರೆ. ಕಳೆದ 2001ರಲ್ಲಿ ಒಪ್ಪಂದದ ಪ್ರಕಾರ ಪೆರುಂಬಾಡಿಯ ಆಯ್ದ ಜಾಗದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿ ಸಮ್ಮತಿಸಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ವೈಜ್ಞಾನಿಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂದು ಚುಪ್ಪ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರೊಂದಿಗೆ ದೂರಿದರು.

ಆರ್ಜಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ದೂರು ನೀಡಿದಾಗ ನಾಯಿಗಳ ಸಮಸ್ಯೆಯಿಂದಾಗಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ನಾಯಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳುವದಾಗಿ ಹಾರಿಕೆ ಉತ್ತರ ನೀಡುತ್ತಾರೆ. ಕಸ ವಿಲೇವಾರಿ ಕೇಂದ್ರಕ್ಕೆ ವಾಹನದಲ್ಲಿ ಕಸ ಬರುವ ಸಮಯದಲ್ಲಿಯೇ ನಾಯಿಗಳು ಹಾಗೂ ಕಾಗೆಗಳ ಸಂಚಾರ ಅಧಿಕವಾಗಿದೆ.

ಬಾವಿಗಳ ನೀರು ಕಲುಷಿತ ಗೊಂಡು ರೋಗ-ರುಜಿನಗಳು ಹಬ್ಬುತ್ತಿವೆ, ಕಸ ವಿಲೇವಾರಿ ಕೇಂದ್ರದ ತ್ಯಾಜ್ಯದ ನೀರು ಪಕ್ಕದ ಗ್ರಾಮಸ್ಥರÀ ಗದ್ದೆಗೂ ಹರಿದು ಹಾನಿಯಾಗಿದೆ ಎಂದರು.

ಘನ ತ್ಯಾಜ್ಯಕ್ಕಾಗಿ ಸರಕಾರದಿಂದ ಕಸ ವಿಲೇವಾರಿ ನಿರ್ವಹಣೆಗಾಗಿ ಪ್ರತಿ ವರ್ಷ ರೂ. 25 ಲಕ್ಷ ಬರುತ್ತಿದೆ ಆದರೆ ಈ ಹಣವು ಪಂಚಾಯಿತಿ ಯಲ್ಲಿ ದುರುಪಯೋಗ ವಾಗುತ್ತಿರುವ ದೂರಿದೆ ಎಂದು ಗ್ರಾಮಸ್ಥರ ಪರವಾಗಿ ಬಿ.ಆರ್. ಗಣೇಶ್ ಆರೋಪಿಸಿದರು.