ಕೂಡಿಗೆ, ಸೆ. 5: ಕುಶಾಲನಗರ ಕಾವೇರಿ ತಾಲೂಕು ಹೋರಾಟ ಸಮಿತಿಯ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ಥಾನೀಯ ಸಮಿತಿಯ ರಚನಾ ಸಭೆಯು ಕೂಡಿಗೆ ಸರ್ಕಲ್‍ನ ಗಣಪತಿ ಪೆಂಡಲ್ ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾವೇರಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕಾವೇರಿ ತಾಲೂಕು ರಚನೆ ಮಾಡುವ ಬಗ್ಗೆ ಮತ್ತೊಮ್ಮೆ ಸರಕಾರದ ಗಮನ ಸೆಳೆಯುವಂತೆ ಕಾರ್ಯಕ್ರಮ ರೂಪಿಸುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ಸ್ಥಳೀಯ ಎಲ್ಲಾ ಪಕ್ಷಗಳ ಮುಖಂಡರುಗಳು, ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಹೋರಾಟ ಸಮಿತಿಗಳು ಸಹಕಾರ ನೀಡಬೇಕು. ಜೊತೆಗೆ 19 ಗ್ರಾಮ ಪಂಚಾಯಿತಿಯ ಸ್ಥಾನೀಯ ಸಮಿತಿಗಳನ್ನು ರಚಿಸಿ ಗ್ರಾಮ ಮಟ್ಟದಿಂದಲು ಜನರು ಒಗ್ಗೂಡಿ ಹೋರಾಟಕ್ಕೆ ಬೆಂಬಲ ಸೂಚಿಸಲು ಆಯಾ ಬೂತ್ ಮಟ್ಟದ ಸಮಿತಿಗಳನ್ನು ಆಯ್ಕೆಮಾಡಿ 50 ಮನೆಗಳ ಜವಾಬ್ದಾರಿಯನ್ನು ಒಬ್ಬೊಬ್ಬ ಬೂತ್ ಸಮಿತಿಯ ಸದಸ್ಯರಿಗೆ ನೀಡುವ ಮುಖೇನ ಹೋರಾಟಕ್ಕೆ ಬೆಂಬಲ ನೀಡಲು ಎಲ್ಲರೂ ಸನ್ನದ್ಧರಾಗುವಂತೆ ತಿಳಿಸಿದರು.

ಈ ಸಂದರ್ಭ ಹೋರಾಟಕ್ಕೆ ಬೆಂಬಲವಾಗಿ ಹಾಗೂ ತಾಲೂಕು ರಚನೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಸಭೆಯಲ್ಲಿ ಇದ್ದ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರುಗಳನ್ನು, ವಿವಿಧ ಸಂಘಟನೆಯ ಮುಖಂಡರುಗಳನ್ನು, ವಿವಿಧ ರಾಜಕೀಯ ಪಕ್ಷದ ಮುಖಂಡರು ಜಾತಿ ಧರ್ಮ ಬಿಟ್ಟು ಪಕ್ಷಾತೀತವಾಗಿ ಬೆಂಬಲ ನೀಡುವಂತೆ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮನವಿ ಮಾಡಿದರು.

ಸಭೆಯಲ್ಲಿ ಕೂಡಿಗೆ ಗ್ರಾ.ಪಂ. ಉಪಾಧ್ಯಕ್ಷ ಕೆ.ಟಿ. ಗಿರೀಶ್, ಗ್ರಾ.ಪಂ ಸದಸ್ಯರುಗಳು, ಗ್ರಾ.ಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸೀಗೆಹೊಸೂರು, ಬ್ಯಾಡಗೊಟ್ಟ, ಮದಲಾಪುರ, ಮಲ್ಲೇನಹಳ್ಳಿ, ಕೂಡಿಗೆ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಇದ್ದರು. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಾನೀಯ ಸಮಿತಿಗೆ ಕೆ.ಎಸ್. ಕಾಂತರಾಜ್ ಅಧ್ಯಕ್ಷರಾಗಿ ಆಯ್ಕೆಗೊಂಡರು.

ನಂತರ ಮುಳ್ಳುಸೋಗೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ಸ್ಥಾನೀಯ ಸಮಿತಿಯ ಅಧ್ಯಕ್ಷರನ್ನಾಗಿ ಎಂ.ಕೆ. ಗಣೇಶ್, ಕಾರ್ಯದರ್ಶಿ ಯನ್ನಾಗಿ ತಮ್ಮಯ್ಯ, ಕಾರ್ಯಾಧ್ಯಕ್ಷ ರಾಗಿ ಮುಳ್ಳುಸೋಗೆ ಗ್ರಾ.ಪಂ ಸದಸ್ಯರಾದ ಜಗದೀಶ್ ಅವರನ್ನು ಆಯ್ಕೆ ಮಾಡಲಾಯಿತು. ಕೂಡುಮಂಗ ಳೂರು ಗ್ರಾ.ಪಂ. ವ್ಯಾಪ್ತಿಯ ಸ್ಥಾನೀಯ ಸಮಿತಿಯ ಅಧ್ಯಕ್ಷರನ್ನಾಗಿ ಮನುನಂಜುಂಡ, ಅವರನ್ನು ಆಯ್ಕೆ ಮಾಡಲಾಯಿತು. ಕೇಂದ್ರ ಸಮಿತಿಯ ಮುಖಂಡರು ಗಳಾದ ಜಿ.ಎಲ್. ನಾಗರಾಜ್, ನಾರಾಯಣ್, ಖಾದರ್, ಮೋಹನ್ ಕುಮಾರ್, ದೇವರಾಜ್, ಶರವಣ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.