ಮಡಿಕೇರಿ, ಸೆ. 4: ತಾ. 5 ರಂದು (ಇಂದು) ವೀರಾಜಪೇಟೆಯಲ್ಲಿ ಜರುಗಲಿರುವ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳ ಸಾಮೂಹಿಕ ಮೆರವಣಿಗೆಯೊಂದಿಗೆ ತಾ.6ರ ಬೆಳಗ್ಗಿನ ಜಾವ ವಿಸರ್ಜನೆ ನಡೆಯುವ ಹಿನ್ನೆಲೆ, ಕೊಡಗು ಪೊಲೀಸ್ ಇಲಾಖೆ ಭದ್ರತಾ ಕ್ರಮ ಕೈಗೊಂಡಿದೆ.ಈಗಾಗಲೇ ವಾಹನ ಸಂಚಾರ ಮಾರ್ಗ ಹಾಗೂ ಮದ್ಯ ಮಾರಾಟ ನಿಷೇಧ ಸೇರಿದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದು, ಭದ್ರತಾ ಸಲುವಾಗಿ ಸಂಬಂಧಿಸಿದ 21 ಗಣೇಶೋತ್ಸವ ಸಮಿತಿ ಪ್ರಮುಖರೊಂದಿಗೆ, ಶಾಂತಿ ಸುವ್ಯವಸ್ಥೆ ಸಲುವಾಗಿ ಸಭೆ ನಡೆಸಲಾಯಿತೆಂದು ಎಸ್‍ಪಿ ರಾಜೇಂದ್ರ ಪ್ರಸಾದ್ ಖಚಿತ ಪಡಿಸಿದ್ದಾರೆ.ಭದ್ರತೆಗಾಗಿ ಮೂವರು ಡಿವೈಎಸ್‍ಪಿಗಳು, 11 ಮಂದಿ ವೃತ್ತ ನಿರೀಕ್ಷಕರು, 26 ಮಂದಿ ಉಪ ನಿರೀಕ್ಷಕರು, 45 ಮಂದಿ ಸಹಾಯಕ ಉಪ ನಿರೀಕ್ಷಕರು, 350 ಪೊಲೀಸರು ಮತ್ತು 100 ಮಂದಿ ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಲಾಗುವದು ಎಂದು ಅವರು ಸುಳಿವು ನೀಡಿದ್ದಾರೆ. ಅಲ್ಲದೆ, ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಸಲಹೆ ನೀಡಿದ್ದಾರೆ.