ಕೂಡಿಗೆ, ಸೆ. 5 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿವಾಸಿಗಳ ಕೇಂದ್ರಕ್ಕೆ ಜಿ.ಪಂ ಮಾಜಿ ಅಧ್ಯಕ್ಷ, ಬಸವನಹಳ್ಳಿ ಗಿರಿಜನ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಭೇಟಿ ನೀಡಿ ಕಳೆದ ಒಂದು ತಿಂಗಳಿಂದ ತಾತ್ಕಾಲಿಕ ಶೆಡ್‍ಗಳ ಕಾಮಗಾರಿ ಸ್ಥಗಿತಗೊಂಡಿ ರುವ ಬಗ್ಗೆ ಪರಿಶೀಲನೆ ನಡೆಸಿದರು.

ಆದಿವಾಸಿ ಕುಟುಂಬಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ತಡವಾಗಿ ನೀಡುತ್ತಿರುವ ಬಗ್ಗೆ ಆದಿವಾಸಿಗಳ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿ, ಬ್ಯಾಡಗೊಟ್ಟ ಕೇಂದ್ರದಲ್ಲಿ ಇರುವ 300 ಕ್ಕೂ ಹೆಚ್ಚು ಕುಟುಂಬಗಳೊಂದಿಗೆ ಸಮಸ್ಯೆಗಳನ್ನು ಆಲಿಸಿದರು. ಈಗಾಗಲೇ ಮೂರು ತಿಂಗಳ ಹಿಂದೆ ಭರವಸೆ ನೀಡಿದಂತೆ ದಿಡ್ಡಳ್ಳಿಯಿಂದ ಬ್ಯಾಡಗೊಟ್ಟಕ್ಕೆ ಸ್ಥಳಾಂತರಿಸಿದ ಆದಿವಾಸಿ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡುವ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಲು ಅಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ಆದಿವಾಸಿ ಕುಟುಂಬದ ಸದಸ್ಯರೊಂದಿಗೆ ನಡೆದ ಚರ್ಚೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸರ್ಕಾರವು ಆದಷ್ಟು ಬೇಗ ಹಣ ಬಿಡುಗಡೆ ಮಾಡಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಚುರುಕುಗೊಳಿಸು ವಂತೆ ಎಸ್.ಎನ್.ರಾಜಾರಾವ್ ಸೇರಿದಂತೆ ಕೂಡಿಗೆ ಗ್ರಾ.ಪಂ ಸದಸ್ಯ ರಾಮಚಂದ್ರ, ಆದಿವಾಸಿಗಳು ಆಗ್ರಹಿಸಿದರು.