ಕುಶಾಲನಗರ, ಆ 31: ಸರಕಾರದ ಕೆಲವು ಇಲಾಖೆಯ ಕಾರ್ಯಕ್ರಮಗಳ ಕಾರ್ಯವೈಖರಿ ಯಾವ ರೀತಿಯ ಇರುತ್ತದೆ ಎನ್ನುವದಕ್ಕೆ ಕುಶಾಲನಗರದಲ್ಲಿ ಗುರುವಾರ ನಡೆದ ರಫ್ತು ಜಾಗೃತಿ ಶಿಬಿರ ಒಂದು ಸ್ಪಷ್ಟ ಉದಾಹರಣೆ ಎನ್ನಬಹುದು. ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಡಗು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಕೈಗಾರಿಕೋದ್ಯಮಿಗಳು ಹಾಗೂ ವಾಣಿಜ್ಯೋದ್ಯಮಿಗಳಿಗಾಗಿ ರಫ್ತು ಜಾಗೃತಿ ಶಿಬಿರ ಸ್ಥಳೀಯ ಖಾಸಗಿ ಹೋಟೆಲ್ ಒಂದರ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಪ್ರಚಾರದ ಕೊರತೆಯಿಂದ ಯಾವದೇ ಕೈಗಾರಿಕೋದ್ಯಮಿಗಳಾಗಲಿ, ವಾಣಿಜ್ಯೋದ್ಯಮಿಗಳಾಗಲೀ ಆಗಮಿಸದ ಹಿನ್ನೆಲೆಯಲ್ಲಿ ಸ್ಥಳೀಯ ಸರಕಾರಿ ಕಾಲೇಜೊಂದರ ವಿದ್ಯಾರ್ಥಿಗಳನ್ನು ಸಭಿಕರನ್ನಾಗಿಸುವಲ್ಲಿ ಸಂಘಟಕರು ಯಶಸ್ವಿಯಾಗಿದ್ದು ಕಂಡುಬಂತು.

ಶಿಬಿರ ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವವರು ಗೈರು ಹಾಜರಾಗಿದ್ದು ಒಟ್ಟಾರೆ ಸರಕಾರಿ ಕಾರ್ಯಕ್ರಮವೊಂದು ಬೆಳಿಗ್ಗೆ 10.30 ರಿಂದ ಸಂಜೆ ತನಕ ನಡೆದ ತಾಂತ್ರಿಕ ಅಧಿವೇಶನ, ಸಮಾಲೋಚನೆ, ಕಾರ್ಯಕ್ರಮದ ಬಗ್ಗೆ ಚರ್ಚೆ ಎಂಬ ಸಭಾ ನಡವಳಿಕೆಯೊಂದಿಗೆ ಮುಕ್ತಾಯ ಕಂಡಿದ್ದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಮೂಡಿಸಿತು.

-ಸಿಂಚು