ಕುಶಾಲನಗರ, ಆ. 23: ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಪ್ರಾಂತೀಯ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಚಿಂತನೆ ಹೊಂದಿದ್ದಾರೆ ಎಂದು ಜೆಡಿಎಸ್ ಮುಖಂಡ, ಜಿಲ್ಲಾ ಉಸ್ತುವಾರಿ ಜಿ.ಟಿ. ದೇವೇಗೌಡ ಹೇಳಿದರು.

ಇಲ್ಲಿನ ಕೊಪ್ಪಗೇಟ್ ಬಳಿಯ ಹೋಟೆಲ್ ಮಿನಿಸ್ಟರ್ ಕೋರ್ಟ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಡಿಕೇರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿ ಬೃಹತ್ ಜೆಡಿಎಸ್ ಸಮ್ಮೇಳನ ಆಯೋಜಿಸುವ ಉದ್ದೇಶದಿಂದ ಇಂದು ಪೂರ್ವಭಾವಿ ಸಭೆ ನಡೆಸಲಾಗಿದೆ.

ಈ ಸಮಾವೇಶಕ್ಕೆ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕರು ಆಗಮಿಸಲಿದ್ದಾರೆ. ಈ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತ ರನ್ನು ಸಂಘಟಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದರು.

ರಾಜ್ಯದಲ್ಲಿ ಸಿ ವೋಟರ್ಸ್ ಸಮೀಕ್ಷೆ ರಾಜ್ಯ ಸರ್ಕಾರದ ಪರವಾಗಿ ನಡೆಸಲಾಗಿದೆ. ಸರ್ಕಾರ ತನ್ನ ಲೋಪದೋಷಗಳನ್ನು ಮುಚ್ಚಿಡಲು ಹಾಗೂ ಮತದಾರರನ್ನು ದಿಕ್ಕುತಪ್ಪಿಸಲು ಈ ಸಮೀಕ್ಷೆ ಮಾಡಿಸಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ವಿರೋಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಸರ್ವಾಧಿಕಾರಿ ಯಾಗಿ ವರ್ತಿಸುತ್ತಿವೆ. ಇದರಿಂದ ರಾಜ್ಯ ಜನತೆ ಬೇಸತ್ತು ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಾಂತೀಯ ಪಕ್ಷವಾದ ಜೆಡಿಎಸ್ ಬೆಂಬಲಿಸಲು ಜನತೆ ನಿರ್ಧಾರಿಸಿದ್ದಾರೆ. ಈಗ ಸಮೀಕ್ಷೆ ಏನು ನೀಡಿದ್ದಾರೆ ಅದರ ನಾಲ್ಕು ಪಟ್ಟು ಹೆಚ್ಚಿನ ಸ್ಥಾನಗಳನ್ನು ಜೆಡಿಎಸ್ ಗಳಿಸಲಿದೆ ಎಂದರು.

ಮಾಜಿ ಸಚಿವ ಜೀವಿಜಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಮುಂದಿನ ಚುನಾವಣೆಯಲ್ಲಿ ಜನತೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಕೊಡಗು ಜೆಡಿಎಸ್ ಘಟಕದಲ್ಲಿ ಯಾವದೇ ಗೊಂದಲವಿಲ್ಲ. ಮುಂದಿನ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಮಾಜಿ ಸಚಿವ ಜೀವಿಜಯ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿಯೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಶ್ರಮಿಸಲಾಗುವದು ಎಂದರು. ಪಕ್ಷದ ಜಿಲ್ಲಾಧ್ಯಕ್ಷರಾಗಿ ಸಂಕೇತ್ ಪೂವಯ್ಯ ಮುಂದುವರಿಯಲಿದ್ದಾರೆ. ಇದರಲ್ಲಿ ಯಾವದೇ ಗೊಂದಲವಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಸಮ್ಮೇಳನ ನಡೆಸುವ ಬಗ್ಗೆ ಪಕ್ಷದ ಮುಖಂಡ ಶಾಸಕ ಜಿ.ಟಿ. ದೇವೇಗೌಡ ಅವರ ಮಾರ್ಗದರ್ಶನ ಹಾಗೂ ಸಲಹೆ ಮೇರೆಗೆ ಪಕ್ಷವನ್ನು ಸಂಘಟಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಶ್ರಮಿಸಲಾಗುವದು ಎಂದು ಹೇಳಿದರು.

ಈ ಸಂದರ್ಭ ಪಿರಿಯಾಪಟ್ಟಣ ಜೆಡಿಎಸ್ ಮುಖಂಡ ಮಹಾದೇವ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಸುರೇಶ್, ಕಾರ್ಯಾಧ್ಯಕ್ಷ ಭರತ್, ಮುಖಂಡರಾದ ಕೆ.ಎಂ.ಗಣೇಶ್, ಪಾಲಾಕ್ಷ, ಎಚ್.ಬಿ. ಜಯಮ್ಮ, ಗೀತಾ, ಶರೀಫ್, ಎಚ್.ಡಿ. ಚಂದ್ರು, ಹೇಮಂತ್ ಕುಮಾರ್, ಎಂ.ಎಸ್. ರಾಜೇಶ್, ಬಿ.ಡಿ. ಅಣ್ಣಯ್ಯ , ಎಸ್.ಎಸ್. ಚಂದ್ರಶೇಖರ್, ಎಸ್.ಎನ್. ರಮೇಶ್, ರಾಜಶೇಖರ್, ಅಪ್ಪಸ್ವಾಮಿ ಮತ್ತಿತರರು ಇದ್ದರು.