ವೀರಾಜಪೇಟೆ, ಆ. 23: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದ ಪಕ್ಷದ ಸಂಘಟನೆಗೆ ತಳ ಮಟ್ಟದಿಂದಲೇ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು. ಕ್ಷೇತ್ರದ ಎಲ್ಲ ಕಾರ್ಯಕರ್ತರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಹೊಸ ಸಮಿತಿಯನ್ನು ರಚಿಸಲಾಗುವದು ಎಂದು ಪಕ್ಷದ ವಿಧಾನ ಸಭಾ ಕ್ಷೇತ್ರದ ನೂತನ ಅಧ್ಯಕ್ಷ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಹೆಚ್. ಮತೀನ್ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮತೀನ್ ಅವರು ಪಕ್ಷದ ವರಿಷ್ಠರು, ಜಿಲ್ಲಾ ನಾಯಕರು ಗಳಾದ ಬಿ.ಎ. ಜೀವಿಜಯ ಹಾಗೂ ಸಂಕೇತ್ ಪೂವಯ್ಯ ಅವರ ಸಲಹೆ ನಿರ್ದೇಶನದ ಮೇರೆಗೆ ವೀರಾಜಪೇಟೆ ಕ್ಷೇತ್ರದ ಪೂರ್ಣ ಜವಾಬ್ದಾರಿಯನ್ನು ತÀನಗೆ ರಾಜ್ಯ ನಾಯಕ ಹೆಚ್.ಡಿ. ಕುಮಾರ ಸ್ವಾಮಿ ವಹಿಸಿದ್ದಾರೆ. ಪಕ್ಷದ ಹಿರಿಯರಾದ ಎಂ.ಸಿ. ಬೆಳ್ಳಿಯಪ್ಪ ಅವರ ಸಲಹೆ ಪಡೆದು ಕ್ಷೇತ್ರದಾದ್ಯಂತ ಪಕ್ಷದ ಸಂಘಟನೆಗೆ ಕಾರ್ಯತಂತ್ರ ರೂಪಿಸಲಾಗುವದು. ಕೊಡಗಿನ ಚುನಾವಣೆ ಕ್ಷೇತ್ರ ವಿಂಗಡಣೆಯ ಬಳಿಕ ಈ ಕ್ಷೇತ್ರ ಭೌಗೋಳಿಕವಾಗಿ ರಾಜ್ಯದಲ್ಲಿಯೇ ಬಹು ದೊಡ್ಡ ಕ್ಷೇತ್ರದಲ್ಲಿ ಒಂದಾಗಿದೆ. ಈ ಕ್ಷೇತ್ರ ಸಂಪಾಜೆಯಿಂದ ಕುಟ್ಟದವರೆಗೂ 150 ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಸಂಘಟನೆ ಮಾಡುವದು ಇಂದು ಸವಾಲಾಗಿದೆ. ಕ್ಷೇತ್ರದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿದ್ದು ಎಲ್ಲರನ್ನು ಕಾರ್ಯ ಪ್ರವೃತ್ತರನ್ನಾಗಿ ಮಾಡಬೇಕಾಗಿದೆ ಎಂದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಅನೇಕ ಜನಪರ ಹೋರಾಟಗಳನ್ನು ಮಾಡಲಾಗಿದೆ. ಈಗಾಗಲೇ ಸುಮಾರು 60 ಮತಗಟ್ಟೆಗಳಿಗೂ ಅಧಿಕ ಮತಗಟ್ಟೆ ಸಮಿತಿಯನ್ನು ರಚಿಸಿ ಕಾರ್ಯರೂಪಕ್ಕೆ ತರಲಾಗಿದೆ. ಕ್ಷೇತ್ರದ ಎಲ್ಲ ಬೂತ್‍ಗಳಲ್ಲಿ ಸದಸ್ಯತ್ವ ನೋಂದಣಿ ಪ್ರತಿ ಗ್ರಾಮ ವ್ಯಾಪ್ತಿಗೂ ಕೊಂಡೊಯ್ದು ಗ್ರಾಮೀಣ ಕಾರ್ಯಕರ್ತರಿಗೂ ಜವಾಬ್ದಾರಿ ನೀಡಲಾಗುವದು ಎಂದು ಮತೀನ್ ಹೇಳಿದರು.

ಪಕ್ಷದ ಜಿಲ್ಲಾ ಮುಖಂಡ ಬಲ್ಲಚಂಡ ಗೌತಮ್ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿಯೂ ಪಕ್ಷ ಸದೃಢವಾಗಿದ್ದು ಮಾಜಿ ಸಚಿವ ಜೀವಿಜಯ ಅವರು ಈ ಬಾರಿ ಸ್ಪಷ್ಟ ಬಹುಮತದಿಂದ ಗೆಲ್ಲುವದರಲ್ಲಿ ಯಾವದೇ ಸಂಶಯವಿಲ್ಲ. ಮತಗಳ ಅಂತರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯ ಪ್ರವೃತ್ತರಾಗಲಿದ್ದಾರೆ

ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ರಾಜ್ಯಕ್ಕೆ ನೀಡಿರುವ ಅದ್ಭುತ ಯೋಜನೆಗಳನ್ನು ಜನತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗವದು ಎಂದು ಹೇಳಿದರು.

ಜಿಲ್ಲಾ ಮತ್ತೊಬ್ಬ ಮುಖಂಡ ಸಿ.ಎ.ನಾಸೀರ್ ಮಾತನಾಡಿ ಈ ಬಾರಿ ಕೊಡಗಿನ ಎರಡು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಜಯ ಸಾಧಿಸಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕೈಗಾರಿಕೆ ಹಾಗೂ ವಾಣಿಜ್ಯ ಘಟಕದ ಪಾರೆಮಜಲು ಕುಸುಮ್ ಕಾರ್ಯಪ್ಪ, ಹಿಂದುಳಿದ ಜಿಲ್ಲಾ ಘಟಕದ ಹೆಚ್.ಜಿ. ಗೋಪಾಲ್, ಜಿಲ್ಲಾ ಮುಖಂಡ ಹನೀಫ್, ಕ್ಷೇತ್ರದ ಮುಖಂಡ ಸಕ್ಲೇನ್ ಮತ್ತಿತರರು ಉಪಸ್ಥಿತರಿದ್ದರು.