ಸೋಮವಾರಪೇಟೆ, ಆ.23: ಶತಮಾನಗಳ ಹಿಂದೆ ಏಳುಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಭೀಕರ ಬರಗಾಲ ಬಂದು ಊರಿನಲ್ಲಿದ್ದ ಬೃಹತ್ ಕೆರೆಯಲ್ಲೂ ಹನಿ ನೀರು ಸಿಗದಾದಾಗ, ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ತಾ. 24ರಂದು (ಇಂದು) ಬಾಗಿನ ಅರ್ಪಣೆ ನೆರವೇರಲಿದ್ದು, ಗ್ರಾಮದ ಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ಸಮಿತಿ ಸಕಲ ಸಿದ್ದತೆಯಲ್ಲಿ ತೊಡಗಿದೆ.

ಸೋಮವಾರಪೇಟೆ ನಗರದಿಂದ 7 ಕಿ.ಮೀ. ದೂರವಿರುವ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಇತಿಹಾಸ ಪ್ರಸಿದ್ಧ, ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ತಾ. 24ರಂದು ಊರಿನ ಪ್ರಮುಖರು, ಜನಪ್ರತಿನಿಧಿಗಳು, ನವವಿವಾಹಿತ ದಂಪತಿಗಳು ಬಾಗಿನ ಅರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಪೂಜಾ ಕಾರ್ಯದಲ್ಲಿ ಭಾಗವಹಿಸುವ ಸಾವಿರಾರು ಮಂದಿಗೆ ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿದೆ.

ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸುವದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಇಂದಿನವರೆಗೂ ಈ ದೈವಿಕ ಕಾರ್ಯಗಳನ್ನು ಗ್ರಾಮಸ್ಥರು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ.

ಕ್ಷೇತ್ರದ ಹಿನ್ನೆಲೆ: ಸಾವಿರಾರು ವರ್ಷಗಳ ಹಿಂದೆ ಮಾವಿನಕಟ್ಟೆ ಮಲ್ಲೇಗೌಡರು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಪ್ರಸಿದ್ಧಿಯಾಗಿದ್ದವರು. ದೊಡ್ಡ ಕುಟುಂಬದ ಮಲ್ಲೇಗೌಡರ ಮನೆಯಲ್ಲಿ ಹತ್ತಾರು ಮನೆ- ಮಠಗಳಿಗೆ ಸಾಕಾಗುವಷ್ಟು ದವಸ ಧಾನ್ಯಗಳು ತುಂಬಿರುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲಿ ಪ್ರಕೃತಿಯ ವೈಚಿತ್ರ್ಯವೆಂಬಂತೆ ತೀವ್ರ ಕ್ಷಾಮ ಎದುರಾಯಿತು. ಆಪತ್ತು-ವಿಪತ್ತುಗಳಿಂದ ಜನ ಹಾಗೂ ಜಾನುವಾರುಗಳು ಕಂಗಾಲಾದ ಸಂದರ್ಭ ಮಲ್ಲೇಗೌಡರು ಚಿಂತಾಕ್ರಾಂತರಾಗಿದ್ದರು.

ಹೀಗೆ ಬಂದೊದಗಿದ ಪರಿಸ್ಥಿತಿ ಯನ್ನು ತಿಳಿಯಾಗಿಸುವಂತೆ ಅವರು ಇಷ್ಟದೈವವನ್ನು ಪ್ರಾರ್ಥಿಸಿದ ಸಂದರ್ಭ ಪ್ರತ್ಯಕ್ಷವಾದ ದೈವವು ಕೆರೆಯೊಂದನ್ನು ಕಟ್ಟಿಸುವಂತೆ ನಿರ್ದೇಶಿಸಿತು. ಇದರಂತೆ ಊರಿನಲ್ಲಿ 16 ಎಕರೆ ಪ್ರದೇಶದಲ್ಲಿ ದೊಡ್ಡಕೆರೆಯೊಂದನ್ನು ನಿರ್ಮಿಸಲು ಮುಂದಾದರು. ನೂರಾರು ಮಂದಿ ಕೆರೆ ನಿರ್ಮಿಸುವ ಕಾರ್ಯದಲ್ಲಿ ಮಗ್ನರಾದರು.

ಆದರೆ ಎಷ್ಟೇ ಆಳ ತೆಗೆದರೂ ಕೆರೆಯಲ್ಲಿ ಒಂದು ಹನಿ ನೀರೂ ಬರಲಿಲ್ಲ. ಮತ್ತೆ ಚಿಂತಾಕ್ರಾಂತರಾದ ಗೌಡರು ದೈವದ ಮೊರೆಹೋದರು. ದೈವ ಅವತರಿಸಿ ಹೊನ್ನಿನ ಗುಣವುಳ್ಳ ಮುತ್ತೈದೆಯನ್ನು ಕೆರೆಗೆ ಬಲಿ ನೀಡಿದರೆ ಜಲದೇವತೆ ಆಕೆಯಲ್ಲಿ ಗಂಗಾಮಾತೆ ಯಾಗಿ ಅವತರಿಸುವಳೆಂದು ಹೇಳುತ್ತದೆ. ಈ ಸಂದರ್ಭ ಮತ್ತೆ ಚಿಂತೆಗೆ ಒಳಗಾದ ಮಲ್ಲೇಗೌಡರು ತನ್ನ ಪತ್ನಿಯೊಂದಿಗೆ ವಿಷಯ ಪ್ರಸ್ತಾಪಿಸಿದರು.

ಇದನ್ನು ಕೇಳಿಸಿಕೊಂಡ ಹೊನ್ನಮ್ಮ ಊರಿಗೆ ಉಪಕಾರವಾಗಲು ತಾನೇ ಕೆರೆಗೆ ಹಾರವಾಗಲು ನಿರ್ಧರಿಸಿದಳು. ಶುಭದಿನದಂದು ಕೆರೆಯಲ್ಲಿ ಪೂಜೆ ಸಲ್ಲಿಸಿ ಒಂದೊಂದೇ ಮೆಟ್ಟಿಲು ಕೆಳಗಿಳಿಯುತ್ತಿದ್ದಂತೆ ಕೆರೆಯ ಎಲ್ಲೆಡೆ ಜಲ ಉಕ್ಕಿಬಂದು ನೀರಿನಲ್ಲಿ ಅದೃಶ್ಯಳಾದಳು. ಈ ಸಂದರ್ಭ ಹೊರ ಊರಿಗೆ ದಂಡಿಗಾಗಿ ತೆರಳಿದ್ದ ಆಕೆಯ ಗಂಡ ಹಿಂದಿರುಗಿ ಪತ್ನಿಯನ್ನು ಕಾಣದೆ ಬೇಸರಗೊಂಡು ಆತನೂ ಕೆರೆಗೆ ಹಾರಿ ನೀರಿನೊಂದಿಗೆ ವಿಲೀನಗೊಂಡನು ಎಂಬ ಪ್ರತೀತಿ ಇದೆ.

ಕೆರೆಯ ದಂಡೆಯ ಮೇಲಿರುವ ಆಭರಣ ಕಲ್ಲಿನ ಎದುರು ಶುಭಕಾರ್ಯಗಳಿಗೆ ತೆರಳುವ ಮಹಿಳೆಯರು ಕೈಮುಗಿದು ಪ್ರಾರ್ಥಿಸಿದರೆ ಆಭರಣಗಳು ಪ್ರತ್ಯಕ್ಷವಾಗುತ್ತಿದ್ದವು. ನಂತರ ಅವುಗಳನ್ನು ಅಲ್ಲಿಯೇ ತಂದು ಇಡುತ್ತಿದ್ದರು. ಆದರೆ ಓರ್ವ ಮಹಿಳೆ ಆಭರಣಗಳನ್ನು ತೆಗೆದುಕೊಂಡು ಹೋಗಿ ಅಸಲಿ ಆಭರಣಗಳ ಬದಲಿಗೆ ನಕಲಿ ಆಭರಣಗಳನ್ನು ತಂದು ಕಲ್ಲಿನ ಮೇಲಿಟ್ಟಾಗ ಎಲ್ಲವೂ ಕಲ್ಲಾಯಿತು ಎನ್ನುವ ಕಥೆಯೂ ಇದೆ. ಆ ಕಲ್ಲಿಗೆ ಇಂದಿಗೂ ಸಹ ಮುತ್ತೈದೆಯರು ಪೂಜೆ ಸಲ್ಲಿಸುತ್ತಿದ್ದಾರೆ. ಅಂದು ತುಂಬಿದ ಕೆರೆ ಇಂದಿನವರೆಗೂ ಬತ್ತದೇ ಇರುವದು ದೈವೇಚ್ಛೆ ಎಂಬ ನಂಬಿಕೆ ಎಲ್ಲರಲ್ಲಿದ್ದು, ಹೊನ್ನಮ್ಮನ ಕೆರೆಯನ್ನು ಇಂದಿಗೂ ವಿಶೇಷ ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಇದರೊಂದಿಗೆ ಈ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದ ಕೃಷಿಕಾರ್ಯಕ್ಕೂ ಹೊನ್ನಮ್ಮನ ಕೆರೆ ಮೂಲಾಧಾರವಾಗಿದ್ದು, ಕೃಷಿಕ ವರ್ಗದ ಜೀವನಾಧಾರವಾಗಿದೆ.

- ವಿಜಯ್ ಹಾನಗಲ್