ಗೋಣಿಕೊಪ್ಪಲು, ಆ. 22: ಜಾತ್ಯತೀತ ಜನತಾದಳದ ವಿರಾಜಪೇಟೆ ಕ್ಷೇತ್ರ ಅಧ್ಯಕ್ಷರಾಗಿರುವ ಮನೆಯಪಂಡ ಬೆಳ್ಯಪ್ಪ ಅವರ ಸ್ಥಾನಕ್ಕೆ ಬೇರೆ ಯಾರನ್ನೇ ನೇಮಿಸಿದರೆ ಸ್ವೀಕರಿಸದೆ ಇರುವ ನಿರ್ಧಾರವನ್ನು ಜೆಡಿಎಸ್ ಮುಖಂಡರುಗಳ ಹಾಗೂ ಕಾರ್ಯಕರ್ತರುಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ಕ್ಷೇತ್ರ ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರ ಅಧ್ಯಕ್ಷರನ್ನು ಬದಲಾಯಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ಚರ್ಚಿಸಿ ಪಕ್ಷದ ರಾಜ್ಯ ನಾಯಕರುಗಳ ನಿರ್ಧಾರವನ್ನು ಖಂಡಿಸಲಾಯಿತು. ಕ್ಷೇತ್ರದಲ್ಲಿ ಬೇರೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದರೆ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಪಕ್ಷದ ಕಾರ್ಯಕರ್ತರುಗಳ ಮನ ನೋಯಿಸಿ ಪಕ್ಷವನ್ನು ಮುನ್ನಡೆಸುವ ಪ್ರಯತ್ನ ನಡೆಸುವದನ್ನು ರಾಜ್ಯ ನಾಯಕರುಗಳು ನಿಲ್ಲಿಸಬೇಕು. ಕ್ಷೇತ್ರ ನಾಯಕರುಗಳನ್ನು ಕಾರ್ಯಕರ್ತರುಗಳೇ ಆಯ್ಕೆ ಮಾಡುತ್ತೇವೆ. ಪಕ್ಷ ಸಂಘಟನೆಯಲ್ಲಿ ತೊಡಗಿರುವ ಬೆಳ್ಯಪ್ಪ ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಲಾಗಿದೆ ಎಂಬ ನಿರ್ಧಾರ ಕಾರ್ಯಕರ್ತರುಗಳಿಗೆ ಮಾಡಿದ ಅವಮಾನ ಎಂಬ ಆಕ್ರೋಶ ವ್ಯಕ್ತಗೊಂಡಿತು.

ಹಿರಿಯ ಮುಖಂಡ ಜೀವಿಜಯ ಅವರ ಒತ್ತಡದಿಂದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂತಹ ನಿರ್ಧಾರವನ್ನು ವ್ಯಕ್ತಪಡಿಸಿರುವದು ದಶಕಗಳಿಂದ ಪಕ್ಷದಲ್ಲಿಯೇ ದುಡಿಯುತ್ತಿರುವ ಕಾರ್ಯಕರ್ತರುಗಳನ್ನು ಕಡೆಗಣನೆ ಮಾಡಿದಂತಿದೆ. ಜೀವಿಜಯ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿರುವವರಲ್ಲಿ ಹುಳಿಹಿಂಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ವ್ಯಕ್ತವಾಯಿತು.

ಮುಂಬರುವ ಚುನಾವಣೆಯಲ್ಲಿ ಎಂಎಲ್‍ಎ ಸ್ಥಾನಕ್ಕೆ ಪಕ್ಷದ ಹಿರಿಯರುಗಳಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಹೊಸೂರು ಸತೀಶ್ ಜೋಯಪ್ಪ ಹಾಗೂ ಮಾತಂಡ ರಮೇಶ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಈ ಬಗ್ಗೆ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಂಡು ಹಿರಿಯ ನಾಯಕರುಗಳ ಗಮನಕ್ಕೆ ತರುವಂತೆ ನಿರ್ಧರಿಸಲಾಯಿತು.

ರಾಜ್ಯ ಸಮಿತಿ ಸದಸ್ಯ ನಾಗರಾಜು ಮಾತನಾಡಿ, ಪಕ್ಷದಲ್ಲಿ ನಾಯಕರುಗಳು ಬೇರೆ ಬೇರೆ ಇದ್ದರೂ ಕಾರ್ಯಕರ್ತರುಗಳು ಒಂದಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಆದರೆ ಕಾರ್ಯಕರ್ತರುಗಳನ್ನು ಗುರುತಿಸುವ ಕೆಲಸವನ್ನು ನಾಯಕರುಗಳು ಮಾಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಮುಖಂಡ ಹೊಸೂರು ಸತೀಶ್ ಜೋಯಪ್ಪ ಮಾತನಾಡಿ, ನಾಯಕರು ಗಳು ವೈಮನಸ್ಸು ಬಿಟ್ಟು ಸಮನ್ವಯತೆ ಕಾಪಾಡಬೇಕು. ಕಚ್ಚಾಟದಿಂದ ಪಕ್ಷದ 2-3 ನೇ ಹಂತದ ಕಾರ್ಯಕರ್ತ ರುಗಳು ತಬ್ಬಲಿಯಾಗುವಂತೆ ಆಗಿದೆ. ಸಾಮೂಹಿಕ ನಾಯಕತ್ವದ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಬೇಕು. ಪಕ್ಷದಲ್ಲಿ ಸಂಘಟನೆಯಾಗಿ ಹೋರಾಟ ನಡೆಯುತ್ತಿಲ್ಲ. ಸರ್ಕಾರದ ಆಡಳಿತದ ವೈಫಲ್ಯದ ಮುಂದೆ ಸಂಘಟನೆ ಬಲ ತೋರಿಸಬೇಕಿದೆ ಎಂದರು.

ಕಾರ್ಯಾಧ್ಯಕ್ಷ ಸುರೇಶ್ ಮಾತನಾಡಿ, ಮುಖಂಡ ಜೀವಿಜಯ ಅವರ ಮೇಲೆ ಗೌರವವಿದೆ. ಆದರೆ, ರಾತೋರಾತ್ರಿ ಅಧ್ಯಕ್ಷರ ಬದಲಾವಣೆಗೆ ಮುಂದಾಗಿರುವದು ಅವರ ಮೇಲೆ ಅಗೌರವ ಮೂಡುವಂತೆ ಮಾಡಿದೆ. ಪಕ್ಷ ಸಂಘಟನೆಗೆ ರಾಜ್ಯ ನಾಯಕರುಗಳು ಅವಕಾಶ ನೀಡಬೇಕು ಎಂದರು.

ಮುಖಂಡ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಹಲವು ದಶಕಗಳಿಂದ ಕುಟ್ಟ ಭಾಗದಲ್ಲಿ ಪಕ್ಷವನ್ನು ಬೆಳೆಸುತ್ತಿದ್ದೇನೆ, ಆದರೆ ದೇವೇಗೌಡ ಅವರು ಸ್ಥಾಪಿಸಿರುವ ಪಕ್ಷದ ಅಧಿಪತ್ಯ ಹೊತ್ತಿರುವ ಕುಮಾರಸ್ವಾಮಿ ಪಕ್ಷದ ಸಂಘಟನೆಗೆ ಕಾರ್ಯಕರ್ತರುಗಳ ಸಲಹೆ ಕೇಳದ ಕಡೆಗಣನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡ ಮಾತಂಡ ರಮೇಶ್ ಮಾತನಾಡಿ, ಬೆಳ್ಯಪ್ಪ ಅವರ ಅಧ್ಯಕ್ಷ ಸ್ಥಾನ ಬದಲಾವಣೆಗೆ ಸಹಿ ಸಂಗ್ರಹ ಅಭಿಯಾನ ಪಕ್ಷದ ಹಿರಿಯರು ಮಾಡಲಿ. ಚುನಾವಣೆ ಸಂದರ್ಭ ಪಕ್ಷಕ್ಕೆ ತೊಂದರೆಯಾಗುವ ಕಾರ್ಯಕ್ಕೆ ಮುಂದಾಗಬಾರದು ಎಂದರು.

ರಾಷ್ಟ್ರೀಯ ಪಕ್ಷಗಳು ಅವರಲ್ಲಿನ ಕಚ್ಚಾಟದಿಂದ ಒಡೆಯುವ ಸಂದರ್ಭ ನಮ್ಮ ಪಕ್ಷಕ್ಕೆ ಲಾಭವೇ ಹೆಚ್ಚು. ಇದನ್ನು ಅರಿತು ನಮ್ಮಲ್ಲಿ ಸಂಘಟನೆ ಬಲ ಹೆಚ್ಚಿಸಲು ಒಗ್ಗಟ್ಟು ಅನಿವಾರ್ಯ ಎಂದರು.

ಸಭೆಯನ್ನು ವೀರಾಜಪೇಟೆ ಕ್ಷೇತ್ರ ಅಧ್ಯಕ್ಷ ಮನೆಯಪಂಡ ಬೆಳ್ಯಪ್ಪ ಉದ್ಘಾಟಿಸಿದರು. ಈ ಸಂದರ್ಭ ರಾಜ್ಯ ಸಮಿತಿ ಸದಸ್ಯ ಕಾರ್ಮಾಡು ಸುಬ್ಬಣ್ಣ, ಮುಖಂಡರುಗಳಾದ ತೀತಿರ ಮಂದಣ್ಣ, ಚೇಂದ್ರಿಮಾಡ ಗಣೇಶ್, ಪಾಣತ್ತಲೆ ವಿಶ್ವನಾಥ್, ಪಿ.ಎಸ್. ಮುತ್ತ, ಮುನೀರ್, ಕಾರ್ಯದರ್ಶಿ ಲೋಹಿತ್‍ಗೌಡ, ವಕ್ತಾರ ಎಂ.ಟಿ. ಕಾರ್ಯಪ್ಪ ಉಪಸ್ಥಿತರಿದ್ದರು. ಗ್ರಾಮಮಟ್ಟದ ಮುಖಂಡರುಗಳು ಪಾಲ್ಗೊಂಡಿದ್ದರು.