ಮಡಿಕೇರಿ, ಆ. 22: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯನ್ನು ಎದುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಅನೈತಿಕ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಬಿಜೆಪಿ, ರಾಜಕೀಯ ಷಡ್ಯಂತ್ರಗಳಿಗೆ ಮುಂದಿನ ದಿನಗಳಲ್ಲಿ ಬಿಜೆಪಿ ತಕ್ಕ ಉತ್ತರವನ್ನು ನೀಡಲಿದೆ ಎಂದು ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ರಾಜ್ಯದ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮತ್ತು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವದು ನಿಶ್ಚಿತ ಎಂದು ಮನಗಂಡಿರುವ ಕಾಂಗ್ರೆಸ್ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಟ್ಟ ಸಂಸ್ಕøತಿಯ ರಾಜಕಾರಣ ಮಾಡಲು ಹೊರಟಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧದ ಮುಗಿದು ಹೋಗಿರುವ ಡಿನೋಟಿಫೈ ಪ್ರಕರಣವನ್ನು ಮತ್ತೆ ಜೀವಂತಗೊಳಿಸಲು ಎಸಿಬಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮತ್ತೊಂದೆಡೆ ರಾಜ್ಯ ಸರಕಾರ ವಿಭಜನೆಯ ರಾಜಕೀಯ ಮಾಡುತ್ತಿದ್ದು, ಪ್ರವಾಸದ ಹೆಸರಿನಲ್ಲಿ ಶಾಲಾ ಮಕ್ಕಳಲ್ಲೇ ಜಾತಿಯ ವಿಷ ಬೀಜ ಬಿತ್ತಲಾಗಿದೆ. ಜಾತಿ-ಜಾತಿಗಳು, ಧರ್ಮ-ಧರ್ಮಗಳ ನಡುವೆ ಒಡಕನ್ನು ಮೂಡಿಸುತ್ತಿರುವದಲ್ಲದೆ ಒಂದು ಧರ್ಮದ ಜನರ ಓಲೈಕೆಗಾಗಿ ಹಿಂದೂಗಳ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ಹಿಂದೂ ಧರ್ಮದ ಮುಖಂಡರು, ಸಂಘಪರಿವಾರದ ಪ್ರಮುಖರು, ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ಬಿಜೆಪಿಯ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಭಾರತೀಶ್ ಆರೋಪಿಸಿದರು.

ಗೋಹತ್ಯೆ, ಗೋವು ಸಾಗಾಟಕ್ಕೆ ನಿರ್ಬಂಧವಿದ್ದರೂ, ಕೊಡಗಿನಲ್ಲಿ ನಿರಂತರವಾಗಿ ಇಂತಹ ಕೃತ್ಯಗಳಿಗೆ ಕಾಂಗ್ರೆಸ್ ಪ್ರಮುಖರೇ ಕುಮ್ಮಕ್ಕು ನೀಡುತ್ತಿದ್ದಾರೆ. ಪರಿಣಾಮವಾಗಿ ಹೊರ ಜಿಲ್ಲೆಯಿಂದ ಬಂದು ಕೆಲವರು ಕೊಟ್ಟಿಗೆಗಳಲ್ಲಿ ಕಟ್ಟಿಹಾಕಿರುವ ಗೋವುಗಳನ್ನೇ ಕದಿಯುತ್ತಿದ್ದಾರೆ.

ತಮ್ಮ ಜೀವಮಾನದಲ್ಲಿ ಇದುವರೆಗೆ ಗೋವುಗಳನ್ನೇ ಸಾಕದಿರುವವರಿಗೆ ಗೋವು ಸಾಕಾಣಿಕೆ ಮಾಡುವವರು ಎಂಬ ಸರ್ಟಿಫೀಕೇಟ್ ನೀಡಿ ಕಾಂಗ್ರೆಸ್ ನಾಯಕರು ಅಕ್ರಮ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಸ್ತಾರಕ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ಮತದಾರ ರಿಂದ ವ್ಯಕ್ತವಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಗೌರವಕ್ಕೆ ಚ್ಯುತಿ ಬರುವ ಘಟನೆಗಳು ನಡೆಯುತ್ತಿದೆ. ಸಚಿವ ಮೇಟಿ ಅವರ ಪ್ರಕರಣದಿಂದ ಹಿಡಿದು ಇತ್ತೀಚೆಗೆ ಕೊಡಗಿನಲ್ಲಿ ನಡೆದ ಪ್ರಕರಣದವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್‍ನಲ್ಲಿ ಹಾಗೂ ಕಾಂಗ್ರೆಸ್ ಸರಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬದು ಸಾಬೀತಾಗು ತ್ತಿದೆ ಎಂದು ಅವರು ಟೀಕಿಸಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಗೌರಿ ಗಣೇಶೋತ್ಸವಕ್ಕೆ ಅನುಮತಿ ಕೇಳಲು ಹೋಗುವವರನ್ನು ಅಲೆದಾಡಿಸುವ ಪ್ರವೃತ್ತಿ ಪೊಲೀಸ್ ಇಲಾಖೆಯಲ್ಲಿ ಕಂಡು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಇತರರಿಗೆ ತೊಂದರೆಯಾಗದಂತೆ ಉತ್ಸವವನ್ನು ಆಚರಿಸಬೇಕೆಂದು ಪೊಲೀಸರು ನಿರ್ಬಂಧ ವಿಧಿಸುತ್ತಿದ್ದು, ಧ್ವನಿವರ್ದಕ ಬಳಕೆಗೆ ಸುಪ್ರಿಂ ಕೋರ್ಟ್‍ನ ಆದೇಶವನ್ನು ಪಾಲಿಸುವಂತೆ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ತಮ್ಮ ಆಕ್ಷೇಪವಿಲ್ಲವಾದರೂ, ರಾತ್ರಿ 10ರಿಂದ ಬೆಳಗಿನ 6 ಗಂಟೆಯವರೆಗೆ ಧ್ವನಿವರ್ಧಕ ಬಳಸಬಾರದು ಎಂಬ ಸುಪ್ರಿಂ ಕೋರ್ಟ್‍ನ ಆದೇಶವನ್ನು ಕೇವಲ ಹಿಂದೂಗಳ ಮೇಲೆ ಮಾತ್ರ ಹೇರದೆ ಇತರರ ಮೇಲೂ ಅದನ್ನು ಹೇರುವಂತಾಗಬೇಕು ಎಂದು ಆಗ್ರಹಿಸಿದರು.

ಗಣೇಶೋತ್ಸವವನ್ನು ಆಚರಿಸುವದಕ್ಕೆ ನಾವು ಯಾರಿಂದಲೂ ಅನುಮತಿ ಪಡೆಯಬೇಕಾಗಿಲ್ಲ. ಇದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದ ರವಿಕುಶಾಲಪ್ಪ, ರಕ್ಷಣೆ ನೀಡುವದು ಪೊಲೀಸರ ಕರ್ತವ್ಯ. ಅದನ್ನು ಬಿಟ್ಟು ಎಲ್ಲದಕ್ಕೂ ನಿರ್ಬಂಧಗಳನ್ನು ವಿಧಿಸಿದರೆ ಹಿಂದೂಗಳು ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ರೈಲ್ವೆ ಮಾರ್ಗ ಬೇಡ

ಕೊಡಗಿನ ಕುಶಾಲನಗರದವರೆಗೆ ರೈಲ್ವೆ ಮಾರ್ಗ ನಿರ್ಮಿಸುವದಕ್ಕೆ ಸ್ವಾಗತವಿದೆ. ಆದರೆ ಮಕ್ಕಂದೂರು ವರೆಗೆ ವಿಸ್ತರಿಸುವ ಹಾಗೂ ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ರೈಲು ಮಾರ್ಗ ಸಂಪರ್ಕ ಕಲ್ಪಿಸುವ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಲಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.60ರಷ್ಟು ಅರಣ್ಯವಿದ್ದು, ರೈಲ್ವೆ ಮಾರ್ಗದಿಂದ ಕೊಡಗಿನ ಅರಣ್ಯ ನಾಶವಾಗುವದು ಮಾತ್ರವಲ್ಲದೆ, ಕೊಡಗು ಇಬ್ಭಾಗವಾಗುವದರೊಂದಿಗೆ ಭೂಪಟದಿಂದ ಅಳಿದು ಹೋಗಲಿದೆ ಎಂದು ರವಿಕುಶಾಲಪ್ಪ ಆತಂಕ ವ್ಯಕ್ತಪಡಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮೋಡ ಬಿತ್ತನೆಗೆ ಮುಂದಾಗಿರುವ ಬಗ್ಗೆ ಪ್ರಸ್ತಾಪಿಸಿದ ಜಿಲ್ಲಾ ವಕ್ತಾರ ನಾಪಂಡ ಕಾಳಪ್ಪ ಅವರು, ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಕೊಡಗು ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಮೋಡÀ ಬಿತ್ತನೆಯಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಲಿದ್ದು, ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಮತ್ತೋರ್ವ ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ ಮಾತನಾಡಿ, ರಾಜ್ಯ ಸರಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದು, ಕಲ್ಲಡ್ಕದ ಶ್ರೀರಾಮ ವಿದ್ಯಾಸಂಸ್ಥೆಗೆ ನೀಡುತ್ತಿದ್ದ ಅಕ್ಷರದಾಸೋಹದ ಅನುದಾನವನ್ನು ಸ್ಥಗಿತಗೊಳಿಸಿರುವದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಶೇ. 90 ರಷ್ಟು ದಲಿತ ಮಕ್ಕಳೇ ವ್ಯಾಸಂಗ ಮಾಡುತ್ತಿರುವ ವಿದ್ಯಾಸಂಸ್ಥೆಯ ಅನುದಾನವನ್ನು ಸ್ಥಗಿತ ಮಾಡಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷ ಬಿ.ಕೆ. ಅರುಣ್‍ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಉಪಸ್ಥಿತರಿದ್ದರು.