ಮಡಿಕೇರಿ, ಆ. 22: ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಮಾಡಲಾಗುತ್ತಿದೆ ಎಂಬ ದೂರುಗಳು ನಗರಸಭೆಗೆ ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿದು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಿಡಲು ನಗರಸಭೆ ನಿರ್ಧರಿಸಿತು. ಅದಕ್ಕಾಗಿ ನಾಯಿ ಹಿಡಿಯುವ ತಂಡಕ್ಕೆ ಜವಾಬ್ದಾರಿ ಒಪ್ಪಿಸಲಾಯಿತು.ಇಂದು ಬೆಳಿಗ್ಗೆ ಕಾನ್ವೆಂಟ್ ಜಂಕ್ಷನ್ ಬಳಿ ಆಟೋ ಟೆಂಪೋವೊಂದು ಬಂದು ನಿಂತಿತು. ಹಿಂಬದಿಯ ಮೂರು ಕಡೆಗಳೂ ಮರ-ಕಬ್ಬಿಣದ ಹಲಗೆಗಳಿಂದ ಮುಚ್ಚಲಾಗಿದ್ದು, ಮೇಲ್ಭಾಗದಲ್ಲಿ ಒಂದಷ್ಟು ಜಾಗ ಮಾತ್ರ ತೆರೆದಿತ್ತು.ಆಟೋದಿಂದ ಇಳಿದ ಇಬ್ಬರು ಕೈಯಲ್ಲಿ ಕಬ್ಬಿಣದ ರಾಡ್‍ಗಳಿಗೆ ಅಳವಡಿಸಿದ್ದ ಕಬ್ಬಿಣದ ಕೇಬಲ್ ಬಳಸಿ ನಾಯಿಗಳನ್ನು

(ಮೊದಲ ಪುಟದಿಂದ) ಹಿಡಿಯಲು ಆರಂಭಿಸಿದರು. ನಾಯಿಗಳ ಕೊರಳಿಗೆ ಉರುಳು ಬೀಳುತ್ತಿದ್ದಂತೆಯೇ ಅವುಗಳನ್ನು ಎಳೆದು ಬಿಗಿ ಮಾಡಲಾಗುತ್ತಿತ್ತು. ಕಿರುಚಾಡಿ, ರಸ್ತೆಯಲ್ಲಿ ಹೊರಳುತ್ತಾ, ಅರೆ ಜೀವಗಳಂತಾಗುತ್ತಿದ್ದ ಪ್ರಾಣಿಗಳನ್ನು ಆಟೋ ಬಳಿ ಧರಧರನೆ ಎಳೆದೊಯ್ಯಲಾಗುತ್ತಿತ್ತು. ಆಟೋ ಮೇಲಿದ್ದ ಪೈಶಾಚಿಕ ಮನಸ್ಸಿನ ವ್ಯಕ್ತಿ ರಾಡುಗಳನ್ನು ಮೇಲೆತ್ತುತ್ತಿದ್ದಾಗ ನಾಯಿಗಳು ನಾಲಿಗೆ ಹೊರಗೆ ಹಾಕಿ ಮಲಮೂತ್ರ ಮಾಡಿಕೊಳ್ಳುತ್ತಾ ಚೀರಾಡುತ್ತಿದ್ದವು. ತಂತಿಯನ್ನು ಕೊರಳಿಂದ ಬಿಡಿಸಿ ಅಮಾಯಕ ಪ್ರಾಣಿಯನ್ನು ಆಟೋಗೆ ಬಿಸಾಕ ಲಾಗುತ್ತಿತ್ತು.

ಮುಗ್ಧ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕಂಡು ಮರುಗಿದ ಕೆಲ ಸಾರ್ವಜನಿಕರು ಹಿಂಸೆ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ಆಟೋ ತಡೆದು ಒಳಗೆ ನೋಡಿದಾಗ ಸುಮಾರು 8 ಶ್ವಾನಗಳು ಜೀವಕ್ಕಾಗಿ ಹಂಬಲಿಸುತ್ತಿದ್ದುದು ಕಂಡು ಬಂದಿತು. ದೂರದ ನಾಗರಹೊಳೆಗೆ ಸಾಗಿಸಲು ನಗರಸಭೆ ಸೂಚಿಸಿದ್ದು, ಪ್ರತಿ ನಾಯಿಗೆ ರೂ. 450 ರಂತೆ ಪಾವತಿಸಲು ಒಪ್ಪಿರುವದು ತಿಳಿದು ಬಂತು. ಘಟನೆ ಬಗ್ಗೆ ವಿಷಯವರಿತ ಪೌರಾಯುಕ್ತೆ ಶುಭ, ನಗರಸಭಾ ಸದಸ್ಯ ನಂದಕುಮಾರ್ ಇವರುಗಳು ದೂರವಾಣಿಯಲ್ಲಿ ಸಂಪರ್ಕಿಸಿ ನಾಯಿಗಳ ಹಿಂಸೆ ಸಹಿಸುವದಿಲ್ಲ ವೆಂದು ಹೇಳಿದರು.

ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಆಗಮಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಅವರು, ಸಾರ್ವಜನಿಕರ ಮನವಿ ಮೇರೆ ನಾಯಿಗಳನ್ನು ಹಿಡಿಯಲಾಗುತ್ತಿದ್ದು, ಸ್ಪಷ್ಟವಾಗಿ ಬಲೆ ಬಳಸಿ ಹಿಡಿಯಲು ಆದೇಶಿಸಲಾಗಿದೆ ಎಂದರು.

ಯಾವದೇ ಕಾರಣಕ್ಕೂ ಕಬ್ಬಿಣದ ಕೇಬಲ್ ಬಳಸಿ, ಹಿಂಸಿಸಿ ಶ್ವಾನಗಳನ್ನು ಹಿಡಿಯಲು ಅವಕಾಶ ನೀಡುವದಿಲ್ಲವೆಂದು ಭರವಸೆ ನೀಡಿದರು. ಮನುಷ್ಯ ರಂತೆಯೇ ಪ್ರಾಣಿಗಳ ಜೀವಕ್ಕೂ ಬೆಲೆ ಇದ್ದು, ಅಮಾನುಷವಾಗಿ ನಡೆದುಕೊಂಡಿರು ವವರ ವಿರುದ್ಧ ಕಿಡಿಕಾರಿದರು.

ಮುಂದೆ ನಾಯಿಗಳಿಗೆ ಯಾವದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದ ‘ಶ್ವಾನ ಹಿಡುಕರು’ ಸ್ಥಳದಿಂದ ಕಾಲ್ಕಿತ್ತರು. -ಚಿದ್ದು