ವೀರಾಜಪೇಟೆ, ಆ. 19: ವಿದ್ಯಾರ್ಥಿ ಜೀವನದಿಂದಲೇ ಇಂಟರಾಕ್ಟ್ ಕ್ಲಬ್‍ಗಳಂತಹ ಸಮಾಜ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ರೋಟರಿಯ ಉಪಾಧ್ಯಕ್ಷ ಡಾ. ಚಂದ್ರಶೇಖರ್ ಹೇಳಿದರು.

ಇಲ್ಲಿನ ತೆಲುಗರ ಬೀದಿಯಲ್ಲಿರುವ ಕೂರ್ಗ್ ವ್ಯಾಲಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್‍ನ ವ್ಯಾಲಿ ಇಂಟರಾಕ್ಟ್ ಕ್ಲಬ್‍ನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಓದು ಬರಹಕ್ಕೆ ಮೊದಲು ಆದ್ಯತೆ ನೀಡಬೇಕು. ದುಶ್ಚಟಗಳಿಂದ ದೂರವಿರಬೇಕು. ಸೇವಾ ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಇದರಿಂದ ಶಿಸ್ತು, ದಕ್ಷತೆ ಪ್ರಾಮಾಣಿಕತೆಯನ್ನು ಭವಿಷ್ಯದಲ್ಲಿ ರೂಢಿಸಿಕೊಳ್ಳಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ವ್ಯಾಲಿ ಇಂಟರಾಕ್ಟ್ ಕ್ಲಬ್‍ನ ಸದಸ್ಯರುಗಳಿಗೆ ಗುರುತಿನ ಬ್ಯಾಡ್ಜ್‍ಗಳನ್ನು ವಿತರಿಸಿ, ಪ್ರಮಾಣ ವಚನ ಬೋದಿಸಲಾಯಿತು.

ಅತಿಥಿಗಳಾಗಿ ವೀರಾಜಪೇಟೆ ರೋಟರಿ ಕ್ಲಬ್‍ನ ಡಾ: ಎಸ್.ವಿ. ನರಸಿಂಹನ್ ಹಾಗೂ ರಾಬಿನ್ ಮುದ್ದಪ್ಪ ಭಾಗವಹಿಸಿ ಕ್ಲಬ್‍ನ ಸದಸ್ಯ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ಹೇಳಿದರು.

ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಶಾಂತರಾಮ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ನಡತೆ ಯೊಂದಿಗೆ ವಿದ್ಯಾಭ್ಯಾಸದಲ್ಲಿಯೂ ಉತ್ತಮ ಶಿಕ್ಷಣ ಪಡೆಯು ವಂತಾಗಬೇಕು ಎಂದರು.

ವ್ಯಾಲಿ ಇಂಟರಾಕ್ಟ್ ಕ್ಲಬ್‍ನ ಅಧ್ಯಕ್ಷರಾಗಿ ಅಖಿಲಾ ಯಾಸ್ಮಿನ್, ಕಾರ್ಯದರ್ಶಿಯಾಗಿ ಪಿ.ಎಸ್.ನಿಶ್ಮಾ ಆಯ್ಕೆಯಾದರು.

ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಭಾನು, ಮುಖ್ಯೋಪಾಧ್ಯಾಯಿನಿ ಸುಮಾಚಿತ್ರಭಾನು ಉಪಸ್ಥಿತರಿದ್ದರು.

ಶಿಕ್ಷಕಿ ಧನಲಕ್ಷ್ಮಿ ಸ್ವಾಗತಿಸಿ ನಿರೂಪಿಸಿ, ನಿಶ್ಮಾ ವಂದಿಸಿದರು.