ಕೂಡಿಗೆ, ಆ. 19: ಇಲ್ಲಿಗೆ ಸಮೀಪದ ಶಿರಂಗಾಲ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಶಿರಂಗಾಲ ಇವರ ಆಶ್ರಯದಲ್ಲಿ ಕುಶಾಲನಗರ ಹೋಬಳಿಯ ‘ಬಿ’ ವಲಯಮಟ್ಟ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದ ಧ್ವಜಾರೋಹಣ ವನ್ನು ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ನೆರವೇರಿಸಿ, ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಕ್ರೀಡಾ ಮನೋಭಾವ ಬೆಳೆಸಿಕೊಂಡಾಗ ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಅನುಕೂಲವಾಗುತ್ತದೆ. ಈ ಹಂತದಲ್ಲಿ ಶಿಕ್ಷಣದ ಜೊತೆಯಲ್ಲಿ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಬದುಕನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಕ್ರೀಡಾಜ್ಯೋತಿಯನ್ನು ತಾ.ಪಂ. ಸದಸ್ಯ ಎನ್.ಎಸ್. ಜಯಣ್ಣ ಸ್ವೀಕರಿಸಿದರು. ವಿದ್ಯಾರ್ಥಿಗಳು ಸೋಲು, ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳಬೇಕು. ಕ್ರೀಡಾ ವಿಷಯದಲ್ಲಿ ಯಾವದೇ ರೀತಿಯ ಭಿನ್ನಾಭಿಪ್ರಾಯ ಇರಬಾರದು ಕ್ರೀಡೆ ಪಡದೆ ಒಂದೆಡೆ ಸೇರುವಿಕೆಗೆ ಪ್ರಯೋಜನವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್ ವಹಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಶಿರಂಗಾಲ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ಚಂದ್ರಶೇಖರ್, ಕಾರ್ಯದರ್ಶಿ ಲೋಕೇಶ್, ಶಿರಂಗಾಲ ಕಾಲೇಜಿನ ಪ್ರಾಂಶುಪಾಲ ಸುರೇಶ್ ಕುಮಾರ್, ಕಾಲೇಜಿನ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ, ಪ್ರೌಢಶಾಲಾ ಮುಖ್ಯಸ್ಥರಾದ ಸೋಮಯ್ಯ, ವಿಜಯ್‍ಕುಮಾರ್, ಸೇರಿದಂತೆ ಸಮಿತಿಯ ಸದಸ್ಯರುಗಳು ಇದ್ದರು. ಈ ಕ್ರೀಡಾಕೂಟದಲ್ಲಿ ಹೋಬಳಿ ವ್ಯಾಪ್ತಿಯ 12 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಂದ್ಯಾಟಗಳು, ಅಥ್ಲೆಟಿಕ್ ಕ್ರೀಡಾಕೂಟಗಳು ನಡೆದವು.