ಕುಶಾಲನಗರ, ಆ. 19: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಶಿಕ್ಷಣ ಇಲಾಖೆ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಗು ಜಿಲ್ಲೆಯಲ್ಲಿ ಗೌರಿ-ಗಣೇಶ ಚತುರ್ಥಿಗೆ ಪೂರ್ವಭಾವಿಯಾಗಿ ‘ಪರಿಸರ ಸ್ನೇಹಿ ಗಣೇಶ ಬಳಕೆಗಾಗಿ ಗಣೇಶೋತ್ಸವ' -2017 ಹಮ್ಮಿಕೊಳ್ಳಲಾಗಿದೆ.

ಕುಶಾಲನಗರ ಜಿಎಂಪಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ನಾಗರೀಕರಿಗೆ ಮಾಹಿತಿ ನೀಡುವ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಬಳಕೆ ಮಾಡುವ ಉದ್ದೇಶದಿಂದ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಸಂಚಾಲಕ ಟಿ.ಜಿ.ಪ್ರೇಮ್‍ಕುಮಾರ್ ತಿಳಿಸಿದ್ದಾರೆ.

ಇದಕ್ಕೆ ಪೂರ್ವ ಭಾವಿಯಾಗಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಸ್ವತಃ ತಾವೇ ಮಣ್ಣಿನಿಂದ ಪುಟ್ಟ ಗಣೇಶ ಮೂರ್ತಿಯನ್ನು ತಯಾರಿಸಿ ಪರಿಸರಸ್ನೇಹಿ ಗಣೇಶೋತ್ಸವದ ಕುರಿತು ಮಕ್ಕಳು ಜನರಲ್ಲಿ ಜಾಗೃತಿ ಮೂಡಿಸಲು ಪ್ರೇರೇಪಿಸಿದ್ದಾರೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್‍ವಾಸ್ ಮಾಹಿತಿ ನೀಡಿದ್ದಾರೆ. ಈ ದಿಸೆಯಲ್ಲಿ ನಾಗರಿಕರು ಸೀಸ, ಪಾದರಸ ಲೇಪಿತ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.) ಗಣಪತಿ ಮೂರ್ತಿಗಳನ್ನು ಬಳಸದೇ, ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಖರೀದಿಸಬೇಕು ಎಂದು ತಿಳಿಸಿದ್ದಾರೆ. ಕುಶಾಲನಗರ ಜೆಎಂಎಫ್‍ಸಿ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಅವರು ಕರಪತ್ರಗಳ ಬಿಡುಗಡೆ ಮಾಡಿದರು. ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್, ಡಿವೈಎಸ್ಪಿ ಸಂಪತ್ ಕುಮಾರ್, ಜೆಎಂಎಫ್‍ಸಿ ನ್ಯಾಯಾಲಯದ ಸರಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.