ಕುಶಾಲನಗರ, ಆ. 19: ಕೂಡಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಬಗ್ಗೆ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಪಂಚಾಯ್ತಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡಿಗೆ ಗ್ರಾಮಸಭೆಯಲ್ಲಿ ನಡೆಯಿತು.

ಕೂಡಿಗೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಹೆಚ್.ಸಿ. ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಹೆಗ್ಗಡಹಳ್ಳಿಯ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ, ಬ್ಯಾಡಗೊಟ್ಟ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಕೊರತೆಯೊಂದಿಗೆ ಶುಚಿತ್ವದ ಸಮಸ್ಯೆ, ಬೀದಿ ದೀಪಗಳು ಕೆಟ್ಟು ನಿಂತಿದ್ದು ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರಾದ ಬಿ.ಡಿ. ಅಣ್ಣಯ್ಯ ಮತ್ತು ಗಣೇಶ್ ಆರೋಪಿಸಿದರು.

ಕೂಡಿಗೆ ಸೋಮವಾರಪೇಟೆ ಸಂಪರ್ಕ ಕಲ್ಪಿಸುವ ಬ್ಯಾಡಗೊಟ್ಟ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ಕುಸಿಯುವ ಹಂತದಲ್ಲಿದೆ. ರಸ್ತೆ ಮೇಲೆ ನೀರು ಹರಿಯುವ ಕಾರಣ ಶಾಲಾ ಮಕ್ಕಳಿಗೆ ಓಡಾಡಲು ತೀವ್ರ ಅನಾನುಕೂಲ ಉಂಟಾಗುತ್ತಿದೆ. ಗ್ರಾಮದ ವಸತಿ ಹೀನರಿಗೆ ನಿವೇಶನ ಒದಗಿಸುವಲ್ಲಿ ಪಂಚಾಯ್ತಿ ವಿಫಲಗೊಂಡಿದೆ ಎಂದು ಆರೋಪಿಸಿ ಅಣ್ಣಯ್ಯ ಆಡಳಿತ ಮಂಡಳಿಗೆ ಛೀಮಾರಿ ಹಾಕಿದರು.

ಕೂಡಿಗೆಯ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಪಡಿತರ ವಿತರಿಸಲು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರಿದ ನಾಗರಿಕರು, ಮತ್ತೆ ಕೆಲವೆಡೆ ಕಳಪೆ ಪಡಿತರಗಳನ್ನು ವಿತರಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಣಿವೆ ಗ್ರಾಮದ ದಂಡಿನಮ್ಮ ಕೆರೆಯನ್ನು ಹೂಳೆತ್ತಿ ಜಾನುವಾರು ಗಳಿಗೆ, ರೈತರಿಗೆ ನೀರಿನ ಅನುಕೂಲ ಕಲ್ಪಿಸಬೇಕೆಂದು ಸಭೆಯಲ್ಲಿದ್ದ ನೀರಾವರಿ ನಿಗಮದ ಅಧಿಕಾರಿಗಳಲ್ಲಿ ಗ್ರಾಮಸ್ಥರು ಕೋರಿದರು.

ವಿವಿಧ ಇಲಾಖೆಯ ಅಧಿಕಾರಿ ಗಳು ಆಯಾ ಇಲಾಖೆಯಿಂದ ಒದಗಿಸುವ ಸೌಲಭ್ಯಗಳ ಕುರಿತು ಸಭೆಯಲ್ಲಿ ಮಾಹಿತಿ ಒದಗಿಸಿದರು.

ಉದ್ಯೋಗ ಖಾತ್ರಿ ಮತ್ತು ಇತರೆ ಯೋಜನೆಯ ಕಾಮಗಾರಿಗಳ ಆಯ್ಕೆ, ನಿವೇಶನರಹಿತರ ಪಟ್ಟಿ ತಯಾರಿಕೆ, ಫಲಾನುಭವಿಗಳ ಗುರುತಿಸುವಿಕೆ, ರಾಜೀವ್‍ಗಾಂಧಿ ಚೈತನ್ಯ ಯೋಜನೆಗೆ ಫಲಾನುಭವಿಗಳನ್ನು ಗುರುತಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವರನ್ನು ವೇದಿಕೆಗೆ ಆಹ್ವಾನಿಸದ ಪಂಚಾಯಿತಿ ಆಡಳಿತ ಮಂಡಳಿ ಕಾರ್ಯವೈಖರಿ ಬಗ್ಗೆ ಕೆಲವು ಗ್ರಾಮಸ್ಥರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಗೋಚರಿಸಿತು.

ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಎಂ.ಎನ್. ಹೇಮಂತ್ ಕುಮಾರ್ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚನ್ನಕೇಶವ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಟಿ. ಗಿರೀಶ್, ಅಭಿವೃದ್ಧಿ ಅಧಿಕಾರಿ ಸ್ವಾಮಿ ನಾಯಕ್ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು.