ಕೂಡಿಗೆ, ಆ. 19: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದ ಕಾಳಿದೇವನ ಹೊಸೂರು ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಸರ್ವೇ ನಂ.8/3ರಲ್ಲಿ ನಾಲ್ಕು ಎಕರೆ ಜಾಗವನ್ನು ನಿವೇಶನಕ್ಕೆ ಮತ್ತು ಗ್ರಾಮ ವ್ಯಾಪ್ತಿಯ ಸಾರ್ವಜನಿಕ ಕಟ್ಟಡಗಳಿಗೆ ಕಾದಿರಿಸಲಾಗಿದೆ.

ಕಾದಿರಿಸಿದ ಜಾಗವು ತಾಲೂಕು ಕಾರ್ಯನಿರ್ವಹಣಾಧಿಕಾರಿಯವರ ಹೆಸರಿನಲ್ಲಿದ್ದು, ಈ ಜಾಗದ ಬಗ್ಗೆ ಅಧಿಕಾರಿಗಳು ಯಾವದೇ ಕ್ರಮಕೈಗೊಳ್ಳದೆ ಪಾಳು ಬಿದ್ದಿದೆ. ನಿವೇಶನ ಹಂಚಿಕೆಗೆ ಗ್ರಾಮ ಪಂಚಾಯಿತಿ ವತಿಯಿಂದ ಮುಂದಾದರು ತಾಲೂಕು ಪಂಚಾಯಿತಿಯಿಂದ ಸಹಕಾರ ದೊರೆಯುತ್ತಿಲ್ಲ. ಕಾದಿರಿಸಿದ ಜಾಗದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬೇಕಾದ ಕಟ್ಟಡಗಳನ್ನು ನಿರ್ಮಿಸಬೇಕೆಂದು ಈ ವ್ಯಾಪ್ತಿಯ ನಾಲ್ಕು ಗ್ರಾಮಗಳಾದ ಹುದುಗೂರು, ಕಾಳಿದೇವನಹೊಸೂರು, ಮದಲಾಪುರ, ಗಂಧದಹಾಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಪ್ರದೇಶವು ಹಾರಂಗಿ ನದಿಯ ಸಮೀಪದಲ್ಲಿ ಮಳೆಗಾಲದಲ್ಲಿ ಹಾರಂಗಿ ಜಲಾಶಯದಿಂದ ಹೆಚ್ಚು ನೀರನ್ನು ನದಿಗೆ ಹರಿಸಿದಾಗ ಮುಳುಗಡೆಗೊಳ್ಳುತ್ತದೆ. ಇಂತಹ ಜಾಗದಲ್ಲಿ ನಿವೇಶನ ಮಾಡಲು ಸಾಧ್ಯವಾಗುವದಿಲ್ಲ. ನಿವೇಶನ ಮಾಡಿದರೂ ಮಳೆಗಾಲದಲ್ಲಿ ಗಂಜಿಕೇಂದ್ರ ತೆರೆಯಬೇಕಾದ ಪ್ರಸಂಗ ಎದುರಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದ್ದರೂ ಇದುವರೆಗೂ ಸ್ಪಂದನ ದೊರೆತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ರವಿ ಹೇಳುತ್ತಾರೆ.

ನಿವೇಶನದ ಸಮೀಪದ ಗ್ರಾಮದಲ್ಲೇ ಅಂಗನವಾಡಿ ಕಟ್ಟಡ ತೆರೆಯಲು ಈಗಾಗಲೇ ಅನುಮತಿ ದೊರೆತಿದೆ. ಅಲ್ಲದೆ, ಸಮೀಪದ ಕಂದಾಯ ಜಾಗದಲ್ಲಿ ಪ್ರಾಥಮಿಕ ಆರೋಗ್ಯ ಕಟ್ಟಡವನ್ನು ಕಟ್ಟಲಾಗಿದ್ದರೂ, ಈ ಕಟ್ಟಡದ ಜಾಗದ ವಿಚಾರವಾಗಿ ಕಾನೂನಿನ ಮೆಟ್ಟಿಲೇರಿರುವದರಿಂದ ಆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕಾದಿರಿಸಿದ ಜಾಗದಲ್ಲಿ ನಿರ್ಮಿಸುವದರಿಂದ ಈ ವ್ಯಾಪ್ತಿಯ ಗ್ರಾಮಗಳಿಗೆ, ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ 328 ಕುಟುಂಬಗಳಿಗೆ ಹಾಗೂ ಗಂಧದಹಾಡಿಯ ಕುಟುಂಬದವರಿಗೆ ಸೇರಿದಂತೆ ಈ ನಾಲ್ಕು ಗ್ರಾಮಗಳಿಗೆ ಉಪಯೋಗವಾಗುತ್ತದೆ. ಇದರ ಸಮೀಪದಲ್ಲಿ ಬಸವನಹಳ್ಳಿ ಗಿರಿ ಜನರ ಸಹಕಾರ ಸಂಘದ ವತಿಯಿಂದ ಪಡಿತರ ವಸ್ತುಗಳನ್ನು ವಿತರಣೆ ಮಾಡುವ ಮತ್ತು ವ್ಯಾಪಾರೀಕರಣವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಕಾಳಿದೇವನ ಹೊಸೂರಿನಲ್ಲಿ ಕಾದಿರಿಸಿದ ಜಾಗದಲ್ಲಿ ಸಾರ್ವಜನಿಕ ಕಟ್ಟಡವನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತು ಕ್ರಮಕೈಗೊಳ್ಳಬೇಕು. ವಿವಿಧ ಇಲಾಖೆಗಳಿಂದ ಬಂದ ರಾಜ್ಯ ಸರ್ಕಾರದ ಹಣ ವಾಪಾಸಾಗುವದರ ಬದಲು ಸಾರ್ವಜನಿಕರಿಗೆ ಉಪಯೋಗವಾಗುವ ಕಟ್ಟಡಗಳಿಗೆ ಉಪಯೋಗವಾಗಬೇಕೆಂದು ಈ ವ್ಯಾಪ್ತಿಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.