ಶ್ರೀಮಂಗಲ, ಆ. 19: ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್‍ಗೆ ಸ್ವಂತ ಕಚೇರಿ ಕಟ್ಟಡ ಸ್ಥಾಪಿಸಲು ಈಗಾಗಲೇ ಪಟ್ಟಣದಲ್ಲಿ ನಿವೇಶನ ಗುರುತಿಸಿ ಮಂಜೂರಾತಿಗೆ ವ್ಯವಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ವರ್ತಕರು ಸಹಕಾರ ನೀಡಬೇಕೆಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಕೆ. ಮುತ್ತಪ್ಪ ಕರೆ ನೀಡಿದರು.

ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ಶ್ರೀಮಂಗಲ ಪಟ್ಟಣ ವ್ಯಾಪ್ತಿಗೆ ವಿದ್ಯುತ್ ಸಮಸ್ಯೆ ಇದ್ದುದ್ದರಿಂದ ಪ್ರತ್ಯೇಕ ವಿದ್ಯುತ್ ಫೀಡರ್ ನಿರ್ಮಿಸಲು ಚೇಂಬರ್ ನೇತೃತ್ವದಲ್ಲಿ ವರ್ತಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರಯತ್ನಿಸಿ ಫೀಡರ್ ಸ್ಥಾಪಿಸಲಾಗಿದೆ. ವಿದ್ಯುತ್ ಸಮಸ್ಯೆ ನಿವಾರಣೆಯಾಗಿದೆ ಎಂದರು.

ಮಾಜಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮಾತನಾಡಿ, ವರ್ತಕರ ಸಮಸ್ಯೆಗೆ ಚೇಂಬರ್ ಆಫ್ ಕಾಮರ್ಸ್ ಸ್ಪಂದಿಸುತ್ತಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಪ್ರತಿಯೊಬ್ಬ ವರ್ತಕರು ಆರ್ಥಿಕ ಸಹಕಾರ ನೀಡುವಂತಾಗಬೇಕು ಎಂದು ಹೇಳಿದರು.

ಚಂಗುಲಂಡ ಪ್ರಭು, ಜಯಪ್ರಕಾಶ್, ಕೋಳೇರ ಬಾಬು, ಚಂಗುಲಂಡ ಮಧುರ, ಪುಗ್ಗೇರ ರೇವತಿ, ಲಕ್ಷ್ಮಣ, ಉಮೇಶ್, ವಿನು, ಕಳಕಂಡ ರವಿ, ಕಾಳಿಮಾಡ ಗಣಪತಿ, ಬೊಜ್ಜಂಗಡ ರಾಜು ಅಯ್ಯಪ್ಪ, ಕ್ವಾಟ್ರಮಾಡ ಗಿಣಿ, ಚೆಟ್ರಂಡ ವಿಜು, ಬಾಬು ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯದರ್ಶಿ ಚೋನೀರ ಕಾಳಯ್ಯ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಬೊಳ್ಳಜಿರ ಅಶೋಕ್ ವಂದಿಸಿದರು.