ಕೂಡಿಗೆ, ಆ. 19: ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ತಮ್ಮನ್ನು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಜ್ಞಾನ-ತಂತ್ರಜ್ಞಾನ ಶಿಕ್ಷಣದತ್ತ ವಿದ್ಯಾರ್ಥಿಗಳು ಮುಖ ಮಾಡಿ ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶ್ರೀಶೈಲ ಬಿರಾಧಾರ್ ಹೇಳಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ತೊರೆನೂರು ಸರ್ಕಾರಿ ಪ್ರೌಢಶಾಲೆ ಯಲ್ಲಿ ವಿಜ್ಞಾನ ಮತ್ತು ಇಕೋ ಕ್ಲಬ್‍ಗಳ ನೆರವಿನೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಗಳ ಮೂಲಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಟಿ.ಕೆ. ಪಾಂಡುರಂಗ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ ಮತ್ತು ತಂತ್ರಜ್ಞಾನದ ಅರಿವು ಇಂದಿನ ಸಾಮಾಜಿಕ ಸಂದರ್ಭದಲ್ಲಿ ಅವಶ್ಯಕವಾಗಿದೆ ಎಂದರು.

ವಿಜ್ಞಾನ ಪರಿಷತ್ತಿನ ಪರಿಸರ ಜಾಗೃತಿ ಆಂಧೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮ್‍ಕುಮಾರ್ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಗಳು ಇರಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಕೆ. ದೇವರಾಜ್ ವಹಿಸಿದ್ದು ಗ್ರಾ.ಪಂ. ಅಧ್ಯಕ್ಷ ದೇವರಾಜ್, ಸಹಕಾರ ಸಂಘದ ನಿರ್ದೇಶಕ ಕೆ.ಎಸ್. ಕೃಷ್ಣೇಗೌಡ, ಟಿ.ಬಿ. ಜಗದೀಶ್, ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಉಪಾಧ್ಯಕ್ಷ ವೆಂಕಟನಾಯಕ್, ಇಕೋ ಕ್ಲಬ್ ಸಂಚಾಲಕ ಮತ್ತು ಶಿಕ್ಷಕ ಶ್ರೀಹರ್ಷ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಜಯಲಕ್ಷ್ಮಿ, ಟಿ.ಬಿ. ಮಂಜುನಾಥ್ ನಿರ್ವಹಿಸಿದರು.