ಕುಶಾಲನಗರ, ಜು. 26: ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ಗುಡ್ಡೆಹೊಸೂರು ಮೂಲಕ ಪ್ರವೇಶ ಕಲ್ಪಿಸಲು ಕಾರ್ಯಯೋಜನೆ ರೂಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ಗುಡ್ಡೆಹೊಸೂರಿನಲ್ಲಿ ಬಿಜೆಪಿ ಪ್ರಮುಖರು ಮನವಿ ಸಲ್ಲಿಸಿದ ಸಂದರ್ಭ ಮಾತನಾಡಿದ ಅವರು, ಮೈಸೂರಿನಿಂದ ಕೊಡಗಿನ ಗಡಿ ಪ್ರದೇಶ ರಾಣಿಗೇಟ್ ತನಕ ನೂತನ ರೈಲ್ವೇ ಯೋಜನೆ ರೂಪುಗೊಳ್ಳಲಿದ್ದು ಈ ಸಂದರ್ಭ ಕಾವೇರಿ ನದಿಗೆ ನೂತನ ಸೇತುವೆ ಕಾಮಗಾರಿ ನಡೆಯಲಿದೆ. ಈ ಸಂದರ್ಭ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ಸಂಪರ್ಕವನ್ನು ಗುಡ್ಡೆಹೊಸೂರು ಮೂಲಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವದು ಎಂದರು.

ಇದರಿಂದ ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ಅಭಿವೃದ್ಧಿಗೊಳ್ಳಲು ಸಾಧ್ಯವಿದೆ ಎಂದು ರೈಲ್ವೇ ಸಲಹಾ ಸಮಿತಿ ಸದಸ್ಯ ಜಿ.ಎಂ.ಮಣಿಕುಮಾರ್ ಶಾಸಕರ ಗಮನ ಸೆಳೆದರು. ಕಾವೇರಿ ನಿಸರ್ಗಧಾಮ ಬಳಿ ಖಾಸಗಿ ವ್ಯಕ್ತಿಗಳು ನದಿ ಒತ್ತುವರಿ ಮಾಡಿರುವ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವದು ಎಂದ ಅವರು, ಕಾನೂನಿನನ್ವಯ ನದಿ ತಟದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡಗಳ ತೆರವಿಗೆ ಸ್ಥಳೀಯ ಆಡಳಿತ ಕ್ರಮಕೈಗೊಳ್ಳಲಿದೆ ಎಂದರು. ಗುಡ್ಡೆಹೊಸೂರು ಸಮೀಪ ತೆಪ್ಪದಕಂಡಿ ಕಾವೇರಿ ನದಿ ತಟಕ್ಕೆ ಭೇಟಿ ನೀಡಿದ ಶಾಸಕರು, ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ರ್ಯಾಫ್ಟಿಂಗ್ ಕ್ರೀಡೆ ನಡೆಸಲು ಸ್ಥಳೀಯರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗ ಳೊಂದಿಗೆ ಚರ್ಚಿಸಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಪ್ರಮುಖರಾದ ಚಿಮ್ಮ ಉತ್ತಪ್ಪ, ಸೋಮವಾರಪೇಟೆ ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ ಮತ್ತಿತರರು ಇದ್ದರು.