ಶನಿವಾರಸಂತೆ, ಜು. 7: ಸರ್ಕಾರ ಜುಲೈ 1 ರಿಂದ ಹೆದ್ದಾರಿಯ 500 ಮೀ. ಒಳಗಿನ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡುವ ಮೂಲಕ ಕ್ರಮ ಕೈಗೊಂಡಿದೆ. ಆದರೆ ಇಲ್ಲಿಯ ಕೆಲ ಮದ್ಯದಂಗಡಿಗಳು ವಾಮ ಮಾರ್ಗದ ಮೂಲಕ ಮತ್ತೆ ಪಟ್ಟಣದತ್ತ ಬರಲು ಎಲ್ಲಾ ತಯಾರಿ ನಡೆಸುತ್ತಿರುವದು ಕಂಡುಬಂದಿದೆ.
ಇಲ್ಲಿಯ ಮಾರುಕಟ್ಟೆ ಬಳಿಯ ಒಂದು ಮದ್ಯದಂಗಡಿ ಇದೀಗ ಮುಚ್ಚಲ್ಪಟ್ಟ ಕೆಲವೇ ಅಂತರದಲ್ಲಿ ಮತ್ತೆ ತೆರೆಯಲು ಕಸರತ್ತು ನಡೆಸುತ್ತಿದ್ದು, ಇದರಿಂದ ಮತ್ತಷ್ಟು ತೊಂದರೆಯನ್ನು ಸ್ಥಳೀಯರು ಹಾಗೂ ಈ ರಸ್ತೆಯಲ್ಲಿ ಬಾಲಿಕ ಪದವಿಪೂರ್ವ ಕಾಲೇಜಿದ್ದು, ತೀರ್ವ ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಈ ಮದ್ಯದಂಗಡಿಯನ್ನು ಜುಲೈ ಒಂದರಿಂದ ಮುಚ್ಚಲು ಕ್ರಮ ಕೈಗೊಂಡಿದ್ದು, ಮತ್ತೆ ಇದೇ ರಸ್ತೆಯಲ್ಲಿ ನೀಡಲು ಮುಂದಾದಲ್ಲಿ ಮುಂದೆ ಸಾರ್ವಜನಿಕವಾಗಿ ವಿವಿಧ ಸಂಘಟನೆ ಮೂಲಕ ಪ್ರತಿಭಟಿಸಲಾಗುವದು ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನು ಈ ಮದ್ಯದಂಗಡಿ ತೆರೆಯಲು ಉದ್ದೇಶಿತ ಸ್ಥಳ ಪ್ರತಿ ಶನಿವಾರ, ಸಂತೆ ನಡೆಯುವ ಸ್ಥಳವಾಗಿದ್ದು, ವಾಹನಗಳು ಸಂತೆ ದಿನ ಕಿಕ್ಕಿರಿದಿರುತ್ತದೆ. ಮದ್ಯ ಸೇವನೆ ಮಾಡಲು ಬರುವವರು ಅಡ್ಡಾ ದಿಡ್ಡಿ ನಿಲ್ಲಿಸುವದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿನಿಯರಿಗೂ ಮಾನಸಿಕ ಕಿರುಕುಳವನ್ನು ನೀಡುವದು ಖಚಿತವಾಗಿದ್ದು, ಸಂಬಂಧಪಟ್ಟವರು ಈ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಬಾರದೆಂದು ಸ್ಥಳೀಯರಾದ ಪ್ರಸಾದ್, ನಾಗೇಶ್, ಮಂಜುನಾಥ್, ರವಿ ರಾಘವ, ರಾಜಶೇಖರ್ ಮುಂತಾದವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.