ವೀರಾಜಪೇಟೆ, ಜು. 7: ನಿನ್ನೆ ರಾತ್ರಿ 7ಗಂಟೆ ಸಮಯದಲ್ಲಿ ಇಲ್ಲಿನ ಮೂರ್ನಾಡು ರಸ್ತೆಯಲ್ಲಿ ಚೆಂಬೆಬೆಳ್ಳೂರು ಗ್ರಾಮದ ಮಹಿಳೆ ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದ ಮೇರೆ ನಗರ ಪೊಲೀಸರು ಇಂದು ಮೂವರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.ತಾ. 6ರಂದು ಚೆಂಬೆಬೆಳ್ಳೂರು ಗ್ರಾಮದ ಕೆ. ಕಾರ್ಯಪ್ಪ, ಧನು ಹಾಗೂ ಸ್ಮಜಾತ ಎಂಬ ಮೂವರು ಮೂರ್ನಾಡು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ಕೆ. ಮನೋಜ್, ಕೆ. ಮಿಲನ್, ಎಂ. ರಾಜೇಶ್ ಹಾಗೂ ಕೆ. ಕಾರ್ಯಪ್ಪ ಎಂಬ ನಾಲ್ವರು ಸಿನಿಮೀಯ ಮಾದರಿಯಲ್ಲಿ ಹಲ್ಲೆ ನಡೆಸಿ ಗಾಯಗೊಳಿಸಿದರಲ್ಲದೆ ಜೀವ ಬೆದರಿಕೆ ಹಾಕಿದ್ದಾರೆಂದು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ನಾಲ್ವರ ಪೈಕಿ ಎಂ. ರಾಜೇಶ್ ಎಂಬಾತ ತಲೆಮರೆಸಿಕೊಂಡಿದ್ದು, ಉಳಿದ ಮೂವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಎರಡು ಗುಂಪುಗಳ ನಡುವೆ ಆಸ್ತಿ ವೈಷಮ್ಯವಿದ್ದು, ಇದು ಹಲ್ಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಮೂರು ಮಂದಿ ಗಾಯಾಳುಗಳು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವದಾಗಿ ಪೊಲೀಸರು ತಿಳಿಸಿದ್ದಾರೆ.