ಸಿದ್ದಾಪುರ, ಜೂ. 23: ರಾಜ್ಯ ಅರಣ್ಯ ನಿಗಮದ ವತಿಯಿಂದ ಬಡವರಿಗೆ ನೀಡಲಾಗುವ ಉಚಿತ ಅಡುಗೆ ಅನಿಲವನ್ನು ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಸಿದ್ದಾಪುರ ಗ್ರಾ.ಪಂ ನಲ್ಲಿ ವಿತರಿಸಿದರು.

ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬದ ಮಹಿಳೆಯರು ನಿತ್ಯ ತೊಂದರೆ ಅನುಭವಿಸುತ್ತಿದ್ದು, ಅವರ ಅನುಕೂಲಕ್ಕೆ ಅರಣ್ಯ ನಿಗಮದ ಸಿ.ಎಸ್.ಆರ್ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 12 ಗ್ರಾ.ಪಂ ವ್ಯಾಪ್ತಿಯಲ್ಲಿ ಅಡುಗೆ ಅನಿಲ ನೀಡಲಾಗಿದ್ದು, ನೂರಾರು ಮಂದಿ ಬಡವರು ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಅಡುಗೆ ಅನಿಲವನ್ನು ಪಡೆದವರು ಅದನ್ನು ಮಾರದೆ ತಾವೇ ಉಪಯೋಗಿಸಲು ಅವರು ತಿಳಿಸಿದರು. ರಾಜ್ಯ ಸರಕಾರವು ಜನಪರ ಯೋಜನೆಗಳನ್ನು ಕೈಗೊಂಡಿದ್ದು, ಬಡವರಿಗೆ ಉಚಿತ ಅಡುಗೆ ಅನಿಲ ನೀಡುವ ಬಗ್ಗೆ ಯೋಜನೆ ರೂಪಿಸಲಾಗಿದೆ.

ಅರಣ್ಯ ಪೈಸಾರಿ ಭೂಮಿಯನ್ನು ಕಂದಾಯ ಪೈಸಾರಿಯನ್ನಾಗಿ ಮಾಡಲು ಸರಕಾರ ನಿರ್ಣಯ ಕೈಗೊಂಡಿದೆ. ಹಿಂದುಳಿದ ವರ್ಗಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಲ್ಯಾಪ್‍ಟಾಪ್ ನೀಡುವ ಬಗ್ಗೆಯೂ ಯೋಜನೆ ರೂಪಿಸಿದ್ದು, ಜನಪರ ಕೆಲಸವನ್ನು ಮಾಡುತ್ತಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ಹಾಡಿಗಳು ಸೇರಿದಂತೆ ಕುಗ್ರಾಮಗಳ ಬಡ ಕುಟುಂಬಗಳಿಗೆ ಮುಂದಿನ ತಿಂಗಳಲ್ಲಿ ಸೋಲಾರ್ ದೀಪ ನೀಡಲಾಗುವದು ಎಂದು ಅವರು ಮಾಹಿತಿ ನೀಡಿದರು.

ಜಿ.ಪಂ ಸದಸ್ಯೆ ಲೀಲಾವತಿ ಮಾತನಾಡಿ, ಅರಣ್ಯ ನಿಗಮದ ವತಿಯಿಂದ ಬಡವರಿಗೆ ಉಚಿತ ಅಡುಗೆ ಅನಿಲ ವಿತರಿಸುತ್ತಿರುವದು ಶ್ಲಾಘನೀಯ. ಈವರೆಗೂ ಯಾರೂ ಕೈಗೊಳ್ಳದಂತಹ ಯೋಜನೆಯನ್ನು ಪದ್ಮಿನಿ ಪೊನ್ನಪ್ಪ ಜಾರಿಗೆ ತಂದಿದ್ದು, ಬಡವರ ಬಗೆಗಿನ ಕಾಳಜಿ ಸಂತೋಷ ತಂದಿದೆ ಎಂದರು.ತಾ.ಪಂ ಸದಸ್ಯೆ ಆಶಾ ಜೇಮ್ಸ್, ಮಾಜಿ ಜಿ.ಪಂ ಸದಸ್ಯ ಎಂ.ಎಸ್ ವೆಂಕಟೇಶ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ 12 ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವಿತರಿಸಲಾಯಿತು.

ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಮಣಿ, ಉಪಾಧ್ಯಕ್ಷೆ ರಾಜೇಶ್ವರಿ, ಗ್ರಾ.ಪಂ ಸದಸ್ಯ ಹಾಗೂ ಯುವ ಕಾಂಗ್ರೆಸ್ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಗ್ರಾ.ಪಂ ಸದಸ್ಯ ಶುಕೂರ್, ಕಾಫಿ ಬೆಳೆಗಾರ ಮಾಂಗೇರ ಪೊನ್ನಪ್ಪ, ಮಾಜಿ ಜಿ.ಪಂ ಸದಸ್ಯ ನಾರಾಯಣ, ಗ್ರಾ.ಪಂ ಸದಸ್ಯರು, ಸಾರ್ವಜನಿಕರು ಹಾಗೂ ಫಲಾನುಭವಿಗಳು ಇದ್ದರು.