ಕುಶಾಲನಗರ, ಜೂ. 22: ಮಂಗಳೂರು ವಿಶ್ವವಿದ್ಯಾನಿಲಯದ ಅಳುವಾರ ಸ್ನಾತಕೋತ್ತರ ಕೇಂದ್ರಕ್ಕೆ ಕಾವೇರಿ ಗಂಗೋತ್ರಿ ಎಂದು ನಾಮಕರಣ ಮಾಡಲು ಆಗ್ರಹಿಸಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮನವಿ ಸಲ್ಲಿಸಿದೆ. ಚಿಕ್ಕಅಳುವಾರ ಕೇಂದ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರೊ. ಎ.ಎಂ. ಖಾನ್ ಅವರಿಗೆ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮತ್ತು ಇತರರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಈಗಾಗಲೇ ಮಾನಸ ಗಂಗೋತ್ರಿ, ಮಂಗಳ ಗಂಗೋತ್ರಿ, ಜ್ಞಾನ ಗಂಗೋತ್ರಿ ಮುಂತಾದ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಕಾವೇರಿ ಮಡಿಲಲ್ಲಿ ಉನ್ನತ ಶಿಕ್ಷಣ ನೀಡುತ್ತಿರುವ ನೂತನ ಕೇಂದ್ರ ಸ್ವತಂತ್ರ ವಿಶ್ವವಿದ್ಯಾನಿಲಯ ಆಗುವ ಅರ್ಹತೆ ಹೊಂದಿದ್ದು, ಈ ಕೇಂದ್ರಕ್ಕೆ ‘ಕಾವೇರಿ ಗಂಗೋತ್ರಿ’ ಎಂದು ನಾಮಕರಣ ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರೊ. ಎ.ಎಂ. ಖಾನ್, ಈ ಬಗ್ಗೆ ವಿಶ್ವವಿದ್ಯಾನಿಲಯದ ಕುಲಪತಿಗಳ ಗಮನಕ್ಕೆ ತರಲಾಗುವದು ಎಂದು ತಿಳಿಸಿದರು. ಈ ಸಂದರ್ಭ ಕೇಂದ್ರದ ಪ್ರಬಾರ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ, ಮುಖ್ಯಸ್ಥರಾದ ಪ್ರೊ. ಕೆ.ಸಿ. ಪುಷ್ಪಲತಾ, ಪ್ರೊ. ಕೆ.ಎಸ್. ಚಂದ್ರಶೇಖರಯ್ಯ, ಸಮಿತಿಯ ಪ್ರಮುಖರಾದ ಸಬಲಂ ಭೋಜಣ್ಣ ರೆಡ್ಡಿ, ಅಶ್ವಥ್ ಮತ್ತಿತರರು ಇದ್ದರು.