ಇದೀಗ ಸಮಸ್ಯೆ ಬಗೆಹರಿದಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಸೆಸ್ಕ್ ಸಿಬ್ಬಂದಿಗಳು ಎಚ್ಚರಿಕೆ ವಹಿಸಬೇಕು. ವಿದ್ಯುತ್ ಮಾರ್ಗದಲ್ಲಿರುವ ಮರಗಳ ರೆಂಬೆಗಳನ್ನು ಕತ್ತರಿಸಿ ಮಾರ್ಗವನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.

ರೈತರು ಹೊಸ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಹಣ ಪಾವತಿಸಬೇಕು ಎಂದು ರಾಮಚಂದ್ರಪ್ಪ ಮಾಹಿತಿ ನೀಡಿದರು. ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕೆಂಚಮ್ಮನ ಬಾಣೆ ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆಯಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರ್ಗದಾಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಾಟರ್‍ಮೆನ್ ವಸಂತ ಕುಮಾರ್ ಆರೋಪಿಸಿದರು. ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿ ಸೂಚಿಸಿದರು.

ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ತಪ್ಪಲು ಸಮೀಪದ ಕೊತ್ನಳ್ಳಿ, ಬೀದಳ್ಳಿ, ಹೆಗ್ಗಡಮನೆ, ನಾಡ್ನಳ್ಳಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಸೂರ್ಲಬ್ಬಿ ಮುಂತಾದ ಗ್ರಾಮಗಳಲ್ಲಿ ಮಳೆಗಾಲ ಪ್ರಾರಂಭವಾದರೆ ವಿದ್ಯುತ್ ಸಮಸ್ಯೆ ಎದುರಾಗಲಿದೆ. ಮರ ಬಿದ್ದು ವಿದ್ಯುತ್ ಮಾರ್ಗಕ್ಕೆ ಹಾನಿಯಾದರೆ ತಕ್ಷಣಕ್ಕೆ ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಲೈನ್‍ಮೆನ್ ಸರಿಪಡಿಸಲು ವಿಳಂಬ ಮಾಡಿದರೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೆ ಸ್ಪಂದಿಸಲಾಗುವದು ಎಂದು ಭರವಸೆ ನೀಡಿದರು.

ವಿದ್ಯುತ್ ಕಂಬಗಳಲ್ಲಿ ದೃಶ್ಯವಾಹಿನಿಯವರು ಕೇಬಲ್‍ಗಳನ್ನು ಕಟ್ಟಿದ್ದು, ಇದರಿಂದ ಅನಾಹುತ ಎದುರಾಗುವ ಸಂಭವವಿದೆ. ಕೇಬಲ್‍ನವರು ಸೆಸ್ಕ್‍ಗೆ ಹಣ ಪಾವತಿಸುತ್ತಾರೆಯೆ? ಎಂದು ಸುರೇಶ್ ಶೆಟ್ಟಿ ಪ್ರಶ್ನಿಸಿದರು. ಕೇಬಲ್‍ನವರು ಈಗ ಹಣ ಪಾವತಿಸುತ್ತಿಲ್ಲ. ಕಂಬವೊಂದಕ್ಕೆ 100ರೂ.ಗಳನ್ನು ಕಟ್ಟಬೇಕು. ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವದು ಎಂದು ರಾಮಚಂದ್ರಪ್ಪ ಭರವಸೆ ನೀಡಿದರು.

ಕಲ್ಕಂದೂರು ಸುಧಾಕರ, ಬೇಳೂರು ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ರೈ, ನೇಗಳ್ಳೆ ಕರ್ಕಳ್ಳಿ ಕೆ.ಜಿ.ಬಸಪ್ಪ, ಹಾನಗಲ್ಲು ಗ್ರಾಮದ ವಿಕ್ರಾಂತ್, ಐಗೂರು ಗ್ರಾಮದ ರಾಮಪ್ಪ, ಕುಸೂಬೂರು ಹಳ್ಳದಿಣ್ಣೆ ಬಿ.ಎನ್. ರಘು, ಬೇಳೂರಿನ ಹರೀಶ್ ಮತ್ತಿತರರು ವಿದ್ಯುತ್ ಸಮಸ್ಯೆಯ ಬಗ್ಗೆ ಅಧಿಕಾರಿಯ ಗಮನಸೆಳೆದರು.

ಸಭೆಯಲ್ಲಿ ಇಲಾಖೆಯ ಮೈಸೂರು ವಿಭಾಗದ ಕಾರ್ಯ ನಿರ್ವಹಣಾಧಿಕಾರಿ ತಾರಾ, ಕೊಡಗು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್, ಆಂತರಿಕ ಲೆಕ್ಕಪರಿಶೋಧಕರಾದ ದಿನೇಶ್, ದೇವಯ್ಯ, ಸೋಮವಾರಪೇಟೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನೀಲಶೆಟ್ಟಿ ಉಪಸ್ಥಿತರಿದ್ದರು.