ಕೂಡಿಗೆ, ಜೂ. 22: ರಾಜ್ಯ ಅರಣ್ಯ ಮಂತ್ರಿ ರಮಾನಾಥ ರೈ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಸ್‍ಪಿಗೆ ಒತ್ತಡ ಹೇರಿ ಜನತೆಯ ಆಕ್ರೋಶಕ್ಕೆ ಎಡೆಮಾಡಿ ಕೊಡುವ ರೀತಿಯಲ್ಲಿ ಹೇಳಿಕೆ ನೀಡಿರುವದನ್ನು ಖಂಡಿಸಿ ಮತ್ತು ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಸಂದರ್ಭ ಪಾಕಿಸ್ತಾನ ಪರ ಜಯಕಾರ ಹಾಕಿದ ದೇಶದ್ರೋಹಿಗಳನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ತಾಲೂಕು ಯುವ ಮೋರ್ಚಾ ಮತ್ತು ಹಿಂದೂಪರ ಸಂಘಟನೆಯ ಮುಖಂಡರು ಕೂಡಿಗೆಯ ಡೈರಿ ಸರ್ಕಲ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕುಶಾಲನಗರ ಸಮೀಪದ 7ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿ ಕ್ರಿಕೆಟ್ ಗೆಲುವಿನ ಸಂಭ್ರಮಾಚರಣೆ ನಡೆಸಿದ ದೇಶ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಕಿರಣ್, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ. ಭೋಗಪ್ಪ, ಕೂಡುಮಂಗಳೂರು ಬ್ಲಾಕ್ ಅಧ್ಯಕ್ಷ ಮಂಜುನಾಥ್ ಗುರುಲಿಂಗಪ್ಪ, ಹಿಂದೂ ಸಂಘಟನೆಯ ಪ್ರಮುಖರುಗಳಾದ ಕೆ. ವರದ, ಲಕ್ಷ್ಮಿನಾರಾಯಣ್, ನವನೀತ್ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.