ಕುಶಾಲನಗರ, ಜೂ. 22: ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಕಾವೇರಿ ಪುಷ್ಕರ ಕಾರ್ಯಕ್ರಮ ಈ ಬಾರಿ ಸೆಪ್ಟೆಂಬರ್ 12 ರಿಂದ ಚಾಲನೆಗೊಳ್ಳಲಿದ್ದು, ಈ ಸಂಬಂಧ ಪೂರ್ವಭಾವಿ ಸಿದ್ಧತೆ ಬಗ್ಗೆ ಸಭೆ ಶ್ರೀರಂಗಪಟ್ಟಣದ ಶಾಶ್ವತಿ ಧಾರ್ಮಿಕ ಕೇಂದ್ರದಲ್ಲಿ ನಡೆಯಿತು. 12 ದಿನಗಳ ಕಾಲ ಕಾವೇರಿ ನದಿ ತಟದ ವಿವಿಧ ಕ್ಷೇತ್ರಗಳಲ್ಲಿ ಈ ಸಂಬಂಧ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಿತು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಹಾಗೂ ತಮಿಳುನಾಡು ಪ್ರಾಂತ್ಯದ ಸಂಯೋಜಕ ವೇ.ಬ್ರ. ಡಾ. ಭಾನುಪ್ರಕಾಶ್ ಶರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ಹಾಗೂ ರಾಜ್ಯದ ಸಾಧು-ಸಂತರು, ಪ್ರಮುಖರು ಪಾಲ್ಗೊಂಡು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.

12 ದಿನಗಳ ಕಾಲ ಕಾವೇರಿ ಪುಷ್ಕರ ಅವಧಿಯಲ್ಲಿ ಭಕ್ತಾದಿಗಳು ತಮ್ಮ ರಾಶಿಗನುಗುಣವಾಗಿ ಕಾವೇರಿ ನದಿ ತಟದ ಕ್ಷೇತ್ರಗಳಲ್ಲಿ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ಪುಣ್ಯಸ್ನಾನ ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ಸಭೆಗೆ ಮಾಹಿತಿ ಒದಗಿಸಿದ ಡಾ. ಭಾನುಪ್ರಕಾಶ್ ಶರ್ಮ, ಈ ಸಂದರ್ಭ ರಾಜ್ಯದ ಹಾಗೂ ತಮಿಳುನಾಡು ಭಾಗದ ಕಾವೇರಿ ನದಿ ತಟದ ಆಯ್ದ ಕ್ಷೇತ್ರಗಳಲ್ಲಿ ಕಾರ್ಯಕ್ರಮ ಗಳನ್ನು ರೂಪಿಸಲಾಗುವದು. ಈ ಸಂಬಂಧ ಎರಡೂ ರಾಜ್ಯಗಳ ಸರಕಾರದ ಸಹಕಾರದೊಂದಿಗೆ ನದಿ ತಟದ ಕ್ಷೇತ್ರಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಮನವಿ ಸಲ್ಲಿಸಲಾಗಿದೆ ಎಂದರು.

ಕೊಡಗು ಜಿಲ್ಲೆಯ ಭಾಗಮಂಡಲ, ಬಲಮುರಿ, ಹಾಸನ ಜಿಲ್ಲೆಯ ರಾಮನಾಥಪುರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರ ಸೇರಿದಂತೆ ವಿವಿಧೆಡೆ 12 ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವದು. ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕಾವೇರಿ ಪುಷ್ಕರ ಕಾರ್ಯಕ್ರಮಕ್ಕೆ ಈಗಾಗಲೇ ಪೂರ್ವಸಿದ್ಧತೆ ನಡೆದಿದೆ. ಕಂಚಿ ಕಾಮಕೋಟಿ ಶ್ರೀಗಳು, ಪೇಜಾವರ ಶ್ರೀಗಳು, ಶೃಂಗೇರಿ ಮಠಾಧೀಶರು, ಆದಿಚುಂಚನಗಿರಿ ಮಠಾಧೀಶರು, ಸುತ್ತೂರು ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರುಗಳು, ಸಾಧುಸಂತರು ಈ ಸಂದರ್ಭ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಲಿದ್ದಾರೆ ಎಂದು ಡಾ. ಭಾನುಪ್ರಕಾಶ್ ಶರ್ಮ ಮಾಹಿತಿ ಒದಗಿಸಿದರು.

ಈ ಅವಧಿಯಲ್ಲಿ ಶ್ರೀರಂಗ ಪಟ್ಟಣದ ನಿಮಿಷಾಂಭ ದೇವಾಲಯದ ಬಳಿ ಎರಡೂ ರಾಜ್ಯಗಳ ಸಂತ ಸಮ್ಮೇಳನ ನಡೆಯಲಿದೆ. 500 ಕ್ಕೂ ಅಧಿಕ ಸಾಧು-ಸಂತರು, ಮಠಾಧೀಶರು ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಲಿದ್ದಾರೆ. ಉಳಿದಂತೆ ಕೊಡಗು, ರಾಮನಾಥಪುರ ಹಾಗೂ ಕಾವೇರಿ ನದಿ ಪಾತ್ರದ ವಿವಿಧೆಡೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಸಭೆಯಲ್ಲಿ ಅಖಿಲ ಭಾರತ ಸಾಧುಸಂತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ರಮಾನಂದ ಸ್ವಾಮೀಜಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸ್ಥಾಪಕರಾದ ಶ್ರೀ ಗಣೇಶಸ್ವರೂಪಾನಂದ ಸ್ವಾಮೀಜಿ, ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ತಮಿಳುನಾಡು ಪ್ರಾಂತ್ಯದ ಸಂಚಾಲಕ ವಾಸು ರಾಮಚಂದ್ರನ್, ರಾಮನಾಥಪುರ ವಿಭಾಗದ ಸಂಚಾಲಕ ಕುಮಾರಸ್ವಾಮಿ ಸೇರಿದಂತೆ ಸಮಿತಿಯ ಪ್ರಮುಖರು ಕಾರ್ಯಕರ್ತರು ಇದ್ದರು.