ಡಾ. ಪಾರ್ವತಿ ಅಪ್ಪಯ್ಯ

ಮಡಿಕೇರಿ, ಜೂ. 21: ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪದವಿ ಕೋರ್ಸ್‍ಗಳಿಗೆ ಸಂಬಂಧಿಸಿದ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸುವ ‘ತೆರೆದ ಮನೆ’ ವಿಶೇಷ ಕಾರ್ಯಕ್ರಮ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಅವರು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಕೋರ್ಸ್‍ಗಳು ಮತ್ತು ವಿಭಾಗಗಳಲ್ಲಿ ಇರುವ ಮೂಲ ಸೌಕರ್ಯಗಳು, ಸಂಶೋಧನೆಗೆ ಇರುವ ಅವಕಾಶಗಳು, ಗ್ರಂಥಾಲಯ, ವಿದ್ಯಾರ್ಥಿ ನಿಲಯ, ಪ್ರಯೋಗಾಲಯ, ಶೈಕ್ಷಣಿಕ ಚಟುವಟಿಕೆ, ಉದ್ಯೋಗ ಅವಕಾಶಗಳು, ಶಿಷ್ಯವೇತನ, ಕೌಶಲ್ಯ ಅಭಿವೃದ್ಧಿ ಮತ್ತಿತರ ಬಗ್ಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡುವದೇ ತೆರೆದ ಮನೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಪದವಿ ಪೂರ್ಣಗೊಂಡ ನಂತರ, ಸ್ನಾತಕೋತ್ತರ ಪದವಿಯಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಹೆಚ್ಚಿರುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ತೆರೆದ ಮನೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ಆಸಕ್ತಿ ಇರುವ ಸ್ನಾತಕೋತ್ತರ ಐಚ್ಚಿಕ ವಿಷಯವನ್ನು ಆಯ್ಕೆ ಮಾಡಿಕೊಂಡು ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಪಡೆಯುವಂತಾಗಬೇಕು. ಶಿಕ್ಷಣವೇ ಸಂಪತ್ತು ಆಗಿದ್ದು, ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಪಾರ್ವತಿ ಅಪ್ಪಯ್ಯ ಅವರು ಸಲಹೆ ಮಾಡಿದರು.

ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಆಯ್ಕೆಗಳು ಇದ್ದು, ಇವುಗಳಲ್ಲಿ ಅಧ್ಯಯನ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬೇಕು. ವ್ಯಾಸಂಗದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವದು ಅತ್ಯಗತ್ಯ ಎಂದು ಹೇಳಿದರು.

ಸ್ನಾತಕೋತ್ತರ ಪದವಿಯಲ್ಲಿ ಕನ್ನಡ, ಇಂಗ್ಲೀಷ್, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಗಣಿತ ಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಮನೋಶಾಸ್ತ್ರ ಜೊತೆಗೆ ಸಮಾಜ ಕಾರ್ಯ, ಸಮೂಹ ಸಂವಹನ ಹೀಗೆ ವಿವಿಧ ಕೋರ್ಸ್‍ಗಳಿದ್ದು, ಇವುಗಳನ್ನು ಪಡೆಯುವದರ ಜೊತೆ ಭವಿಷ್ಯದಲ್ಲಿ ಯಾವ ರೀತಿಯ ಕೋರ್ಸ್‍ಗಳು ಒಳಿತಾಗುತ್ತವೆ ಎಂಬ ಬಗ್ಗೆ ಯೋಚಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನ ಮುಖ್ಯ. ಕ್ಷೇತ್ರ ಕಾರ್ಯ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು. ಜೀವನದ ಸ್ವಾವಲಂಬಿ ಬದುಕಿಗೆ ಗಮನಹರಿಸಬೇಕು. ಪ್ರತಿಯೊಂದು ಐಚ್ಚಿಕ ವಿಷಯದಲ್ಲಿಯೂ ಮೌಲ್ಯವಿದ್ದು, ಅದನ್ನು ಕಲಿಯಲು ಪ್ರಯತ್ನಿಸಬೇಕು ಎಂದು ಹೇಳಿದರು. ಓದಿ ಅಂಕ ಪಡೆಯುವದರ ಜೊತೆಗೆ, ಕೌಶಲ್ಯ ಬೆಳೆಸಿಕೊಳ್ಳಬೇಕು. ಸಮಾಜದ ಆಗು ಹೋಗುಗಳನ್ನು ತಿಳಿದುಕೊಂಡು ವಿಮರ್ಶೆ ಮಾಡಬೇಕು. ಸರ್ಕಾರ ಕೌಶಲ್ಯ ಕರ್ನಾಟಕ ಹೆಸರಿನಲ್ಲಿ ಉದ್ಯೋಗ ಕಲ್ಪಿಸುತ್ತಿದ್ದು, ಕೌಶಲ್ಯ ಕರ್ನಾಟಕ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಡಿ. ತಿಮ್ಮಯ್ಯ ಮಾತನಾಡಿ, ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಪದವಿ ಕೋರ್ಸ್‍ಗಳು, ಅವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಗುಣಮಟ್ಟದ ಶಿಕ್ಷಣ ಪಡೆಯಲು ಮುಂದಾಗುವಂತೆ ಸಲಹೆ ಮಾಡಿದರು. ಪ್ರಾಧ್ಯಾಪಕರಾದ ಕಾಶ್ಯಪ್, ಗಾಯತ್ರಿ, ಕಮಲ, ವಿಜಯಲತ ಇತರರು ಇದ್ದರು. ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ ಪೂಣಚ್ಚ ನಿರೂಪಿಸಿದರು. ಕಾಲೇಜಿನ ಹರ್ಷಿತಾ, ಸಾಧನ, ಗೌರಮ್ಮ ಅವರು ಪ್ರಾರ್ಥಿಸಿದರು. ಗಣಕಯಂತ್ರ ವಿಭಾಗದ ಪ್ರಾಧ್ಯಾಪಕ ರವಿಶಂಕರ್ ವಂದಿಸಿದರು.