ಮಡಿಕೇರಿ, ಜೂ. 21: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ವಿಚಾರ ಗೋಷ್ಠಿಯಲ್ಲಿ ಪರಿಸರ, ವನ್ಯಪ್ರಾಣಿ, ಸಾಮಾಜಿಕ ಜಾಲತಾಣಗಳ ಕುರಿತಾದ ವಿಚಾರಧಾರೆಗಳು ಹರಿದಾಡಿದವು.

ಕೊಡಗಿನಲ್ಲಿ ಪ್ರಾಕೃತಿಕ ಅಸಮತೋಲನಕ್ಕೆ ಕೊಡಗಿನವರೇ ಕಾರಣಕರ್ತರಾಗಿದ್ದಾರೆ ಎಂದು ಮದೆ ಮಹೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಗೂ ಹಿರಿಯ ಸಾಹಿತಿ ಬಿ.ಆರ್. ಜೋಯಪ್ಪ ಹೇಳಿದರು.

ಕಾವೇರಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ‘ಕೊಡಗಿನಲ್ಲಿ ಪ್ರಾಕೃತಿಕ ಅಸಮ ತೋಲನ ಕಾರಣ ಮತ್ತು ಪರಿಹಾರ' ವಿಷಯ ಕುರಿತು ಉಪನ್ಯಾಸ ನೀಡಿ, ಅತ್ಯಂತ ಸಾಧು ಮತ್ತು ಅಂಜಿಕೆಯ ಪ್ರಾಣಿ ಕಾಡಾನೆ ಕ್ರೂರಿ ಆಗುವಂತೆ ಮನುಷ್ಯರೇ ಮಾಡಿದ್ದಾರೆ ಎಂದರು.

ಸ್ವಾಭಾವಿಕ ಅರಣ್ಯ ಸಂಪತ್ತು ನಾಶಪಡಿಸಿ, ಅಲ್ಲಿ ಪರಿಸರಕ್ಕೆ ಮಾರಕವಾಗುವ ತೇಗದ ನೆಡುತೋಪು ಮಾಡುವದರ ಮೂಲಕ ಪ್ರಾಕೃತಿಕ ಅಸಮತೋಲನ ಸೃಷ್ಟಿಸಲಾಗಿದೆ. ಹಲವು ದಶಕಗಳ ಹಿಂದೆ ವನ್ಯಸಂಪತ್ತು ಮತ್ತು ವನ್ಯಪ್ರಾಣಿಗಳು ಕೊಡಗಿನಿಂದ ಕಣ್ಮರೆಯಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯಕ್ಕೆ ಮಾಧ್ಯಮ ಕ್ಷೇತ್ರದ ಕೊಡುಗೆ ಅಪಾರ. ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತನಾಮರು ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದ್ದಾರೆ ಎಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹೇಳಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಸಹನಾ ಕಾಂತಬೈಲು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಕೀಳು ಅಭಿರುಚಿಯ ಸಾಹಿತ್ಯಗಳು ಬರುತ್ತಿವೆ. ಬರವಣಿಗೆಯ ಉತ್ತಮ ಸಾಹಿತ್ಯಗಳು ಕಡಿಮೆಯಾಗಿವೆ ಎಂದು ಹೇಳಿದರು.

ನಗರಸಭೆ ಸದಸ್ಯೆ ಅನಿತಾ ಪೂವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು. ಕಸಾಪ ನಿರ್ದೇಶಕ ಎಸ್.ಡಿ. ಪ್ರಶಾಂತ್ ನಿರೂಪಿಸಿದರೆ, ಸಿದ್ಧರಾಜು ಬೆಳ್ಳಯ್ಯ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ವಂದಿಸಿದರು.

ಕವಿಗೋಷ್ಠಿ

ನಂತರ ಕವಯತ್ರಿ ಸಂಗೀತ ರವಿರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಕಟ್ಟೆಮಾಡುವಿನ ದಿವ್ಯಾ ಮಂಡೀರ, ಮಡಿಕೇರಿಯ ಗೌರಮ್ಮ ಮಾದಮ್ಮಯ್ಯ, ಮೂರ್ನಾಡಿನ ಕಿಗ್ಗಾಲು ಎಸ್. ಗಿರೀಶ್, ಬೆಟ್ಟಗೇರಿಯ ಸುನಿತಾ ವಿಶ್ವನಾಥ್, ಕೆ. ನಿಡುಗಣೆಯ ಅಪರ್ಣ ಹರೀಶ್ ರೈ, ಮದೆನಾಡುವಿನ ಸಿದ್ಧರಾಜು ಬೆಳ್ಳಯ್ಯ, ಕೆ. ಬಾಡಗದ ಹೇಮಲತಾ ಪೂರ್ಣಪ್ರಕಾಶ್, ಮೇಕೇರಿಯ ಎಸ್.ಕೆ. ಈಶ್ವರಿ, ಹೊಸ್ಕೇರಿಯ ಕೊಂಪುಳಿರ ಇಂದ್ರಾವತಿ ದೇವಯ್ಯ, ಮಡಿಕೇರಿಯ ಪೂಜಾರೀರ ಕೃಪಾ ದೇವರಾಜ್, ಮಡಿಕೇರಿಯ ನರ್ಸರಿ ವಸಂತ, ಬೆಟ್ಟಗೇರಿಯ ಕಡ್ಲೇರ ತುಳಸಿ ಮೋಹನ್ ಅವರುಗಳು ಕವನ ವಾಚಿಸಿದರು.

ಕಸಾಪ ನಿರ್ದೇಶಕಿ ಪುದಿಯನೆರವನ ರೇವತಿ ರಮೇಶ್ ನಿರೂಪಿಸಿದರೆ, ಕೇಕಡ ಇಂದುಮತಿ ರವೀಂದ್ರ ವಂದಿಸಿದರು.