ಸಿದ್ದಾಪುರ ಜೂ 5: ನೆಲ್ಯಹುದಿಕೇರಿ, ಬೆಟ್ಟದಕಾಡು ಮತ್ತು ನಲ್ವತ್ತೇಕರೆ ಭಾಗದಲ್ಲಿ ಕೆಲವು ದಿನಗಳಿಂದ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು, ಇವುಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟಬೇಕೆಂದು ಒತ್ತಾಯಿಸಿ ಉಪ ವಲಯ ಅರಣ್ಯಾಧಿಕಾರಿ ದೇವಿ ಪ್ರಸಾದ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಎ.ಕೆ. ಹಕೀಂ, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಅಧಿಕವಾಗಿದ್ದು, ನೆಲ್ಯಹುದಿಕೇರಿ ಶಾಲೆಯ ಹಿಂಭಾಗದ ತೋಟವೊಂದರಲ್ಲಿ ಎಂಟಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನಡೆದಾಡಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೋಟ ಕಾರ್ಮಿಕರು ಪ್ರತಿದಿನ ಭಯದಿಂದಲೇ ಕೆಲಸ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಕಾಡಾನೆ ಧಾಳಿಯಿಂದ ಸಾವು- ನೋವುಗಳು ಸಂಭವಿಸುವದಕ್ಕೆ ಮುಂಚಿತವಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಉಪವಲಯ ಅರಣ್ಯಾಧಿಕಾರಿ ದೇವಿಪ್ರಸಾದ್ ಮಾತನಾಡಿ, ಈಗಾಗಲೇ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಕಾರ್ಯಾಚರಣೆಯ ಸಂದರ್ಭ ಸಿಬ್ಬಂದಿಗಳಿಗೆ ಊಟ, ತಿಂಡಿ ಸೇರಿದಂತೆ ಇತರ ಖರ್ಚು ವೆಚ್ಚ ಗಳನ್ನು ಭರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು. ಸ್ಥಳೀ ಯರು ಕಾರ್ಯಾಚರಣೆಗೆ ಸಹಕಾರ ನೀಡಿದರೆ ಕಾರ್ಯಾಚರಣೆ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹಾದ ಅಶ್ರಫ್, ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಉಪಾಧÀ್ಯಕ್ಷೆ ಸಫಿಯ, ಸದಸ್ಯರುಗಳಾದ ಶುಕೂರ್, ಹನೀಫ ಹಾಗೂ ಗ್ರಾಮಸ್ಥರು ಹಾಜರಿದ್ದರು.