ಮಡಿಕೇರಿ, ಜೂ.5 : ಇಂದಿನ ಆಧುನಿಕ ಬದುಕಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ರಂಗಗಳಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಬ್ರಾಂಚ್ ಲೆಸ್ ಬ್ಯಾಂಕುಗಳ ವ್ಯವಸ್ಥೆ ಬರುವ ಸಾಧ್ಯತೆ ಇದೆ. ಆದ್ದರಿಂದ ಗ್ರಾಹಕರು ಹೊಸತನಕ್ಕೆ ಹೊಂದಿಕೊಳ್ಳುವತ್ತ ಹೆಜ್ಜೆ ಇಡಬೇಕಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆರ್ಥಿಕ ಸಾಕ್ಷರತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ಇಡೀ ವಿಶ್ವದಲ್ಲಿ ಹೆಚ್ಚಿನ ನಗದು ವ್ಯವಹಾರವಾಗು ತ್ತಿರುವದು ಭಾರತದಲ್ಲಿ, ನಗದು ವ್ಯವಹಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಂತರ್ಜಾಲ ಭೀಮ್ ಆ್ಯಪ್ ಬಳಸಬೇಕಿದೆ. ಆ ನಿಟ್ಟಿನಲ್ಲಿ ಹೊಸತನಕ್ಕೆ ಹೊಂದಿ ಕೊಂಡು ನಗದು ವ್ಯವಹಾರವನ್ನು ಕಡಿಮೆ ಮಾಡಬೇಕಿದೆ. ಇದರಿಂದ ಆರ್ಥಿಕ ಚಟುವಟಿಕೆಯಲ್ಲಿ ಪಾರದರ್ಶಕತೆ ಕಾಪಾಡಬಹುದಾಗಿದೆ. ಸಾವಿರಾರು ವರ್ಷಗಳಲ್ಲಿ ಆಗಿರುವ ಅನ್ವೇಷಣೆಗಳು, ಸಂಶೋಧನೆಗಳು ಕಂಪ್ಯೂಟರ್ ಯುಗದಲ್ಲಿ ಆಗಿದೆ. ಗ್ರಾಹಕರು ಸಹ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅಮೂಲಾಗ್ರ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ ಎಂದು ಹೇಳಿದರು.

ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ. ನಾಣಯ್ಯ ಮಾತನಾಡಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವ ಮೂಲಕ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಬೇಕಿದೆ. ಸರ್ಕಾರ ಜನಧನ್ ಯೋಜನೆಯಡಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿ ಸರ್ಕಾರದ ಸೌಲಭ್ಯಗಳನ್ನು ಹಾಗೂ ಇತರೆ ಆರ್ಥಿಕ ವ್ಯವಹಾರ ನಡೆಸಲು ಬ್ಯಾಂಕ್ ಖಾತೆ ಅತ್ಯಗತ್ಯವಾಗಿ ಬೇಕಿದೆ ಎಂದು ಹೇಳಿದರು. ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತೀಂದ್ರ ಮಾತನಾಡಿ ಇತ್ತೀಚಿನ ದಿನದಲ್ಲಿ ಬ್ಯಾಂಕ್ ಖಾತೆ ಇಲ್ಲದವರನ್ನು ಊಹಿಸುವದು ಕಷ್ಟ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿ ಆರ್ಥಿಕ ಚಟುವಟಿಕೆ ಕೈಗೊಳ್ಳುವದನ್ನು ಕಾಣುತ್ತೇವೆ. ಆ ನಿಟ್ಟಿನಲ್ಲಿ ಬ್ಯಾಂಕಿಂಗ್ ಸೇವೆ ಪಡೆಯಲು ಮುಂದಾಗಬೇಕಿದೆ ಎಂದು ಹೇಳಿದರು. ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮುತ್ತಣ್ಣ, ಉಪ ವ್ಯವಸ್ಥಾಪಕ ನಟರಾಜು, ಜಿಲ್ಲೆಯ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು ಹಾಗೂ ಇತರರು ಇದ್ದರು. ಬ್ಯಾಂಕಿನ ತುಂಗರಾಜ್ ನಿರೂಪಿಸಿ, ಬೋಜಮ್ಮ ಪ್ರಾರ್ಥಿಸಿದರು. ತಾ. 6ರಂದು (ಇಂದು) ಪೊನ್ನಂಪೇಟೆ ಮತ್ತು ಕುಟ್ಟ ಗ್ರಾಮದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹ ನಡೆಯಲಿದೆ.