ಸುಂಟಿಕೊಪ್ಪ, ಜೂ. 5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಕಾವೇರಿ ಹಾಗೂ ಸ್ವಚ್ಛ ಪರಿಸರಕ್ಕಾಗಿ ಕಾಲ್ನಡಿಗೆ ಜಾಥಾಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕನ್ನಡ ವೃತ್ತದಲ್ಲಿ ಸ್ವಾಗತ ಕೋರಲಾಯಿತು. ಕನ್ನಡ ವೃತ್ತದಲ್ಲಿ ಸ್ವಾಗತಿಸುವ ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಮಾತನಾಡಿ, ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಧರೆಯಲ್ಲಿ ಏರುಪೇರು ಉಂಟಾಗುತ್ತಿದ್ದು, ಕೆರೆ ತೊರೆಗಳು ಕಣ್ಮರೆಯಾಗುತ್ತಿವೆ. ಇದರಿಂದ ಪರಿಸರದಲ್ಲಿ ವ್ಯತ್ತಿರಿಕ್ತ ಪರಿಣಾಮ ಎದುರಿಸುವಂತಾಗಿದೆ. ಪರಿಸರವನ್ನು ಉಳಿಸಲು ಎಲ್ಲರೂ ಒಗ್ಗೂಡಿ ಪಣತೊಡಬೇಕು ಎಂದರು.

ಈ ಸಂದರ್ಭ ಸೋಮವಾರ ಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಎಸ್.ಭಾರತಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಇ. ಕರೀಂ ಎಂ. ನಾಗರತ್ನ ಸುರೇಶ್, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ್ ಪೂಜಾರಿ, ಜಿಲ್ಲಾ ಕಾರ್ಮಿಕ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಣ್ಣಾಶರೀಫ್, ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರೇಷ್ಮ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.