ಸೋಮವಾರಪೇಟೆ,ಜೂ.5: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಮುಖವಾಗಿ ಐದು ನಿರ್ಣಯಗಳನ್ನು ಅಂಗೀಕರಿಸ ಲಾಗಿದ್ದು, ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ಬಗ್ಗೆ ಕಸಾಪ ಕಳಕಳಿ ವ್ಯಕ್ತಪಡಿಸಿದೆ.

ಕನ್ನಡ ಮಾತೃಭಾಷೆಯಾದ ರಾಜ್ಯದಲ್ಲಿ ಕನ್ನಡ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದ್ದು, ತಾಲೂಕಿನ ಕನ್ನಡ ಶಾಲೆಗಳೂ ಸಹ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳಬೇಕೆಂಬ ಪ್ರಮುಖ ನಿರ್ಣಯವನ್ನು ಅಂಗೀಕರಿಸ ಲಾಗಿದ್ದು, ಈ ಬಗ್ಗೆ ಸರ್ಕಾರವನ್ನು ಆಗ್ರಹಿಸಲು ನಿರ್ಧರಿಸಲಾಯಿತು.

ಸೋಮವಾರಪೇಟೆಯಲ್ಲಿ ನಡೆಯುತ್ತಿರುವ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಐದು ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿರುವ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿ ಸಮ್ಮೇಳನದಲ್ಲೂ ಪ್ರತಿಧ್ವನಿಸಿದ್ದು, ವರದಿಯನ್ನು ಉಲ್ಲೇಖಿಸಿ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿದರೆ, ವಿಚಾರಗೋಷ್ಠಿ ಯಲ್ಲಿ ಅಧ್ಯಕ್ಷರ ಭಾಷಣವಂತೂ ಇದೇ ವಿಷಯಕ್ಕೆ ಮೀಸಲಾಗಿತ್ತು.

ಇದರೊಂದಿಗೆ ತಾಲೂಕು ಕೇಂದ್ರದ ಮುಖಾಂತರ ಹಾಸನ ಜಿಲ್ಲೆಯ ಕೊಣನೂರಿನಿಂದ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ ತಕ್ಷಣ ಪೂರ್ಣಗೊಳಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದ್ದು, ಇದರಿಂದ ಅಭಿವೃದ್ಧಿ ವಂಚಿತ ತಾಲೂಕು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಲಾಗಿದೆ.

ಕೊಡಗಿನ ಸಮಗ್ರ ಅಭಿವೃದ್ಧಿಗಾಗಿ ರೈಲು ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಒತ್ತು ನೀಡಬೇಕು. ತಾಲೂಕಿನ ಗಡಿಭಾಗದ ಕೆಲವು ಪ್ರದೇಶಗಳನ್ನು ಸೇರಿಸಿಕೊಂಡು ಹಿಂದೆಯಿದ್ದ ಸೋಮವಾರಪೇಟೆ ವಿಧಾನ ಸಭಾ ಕ್ಷೇತ್ರವನ್ನು ಪುನರ್‍ಜಾರಿಗೊಳಿಸಲು ಆಡಳಿತಾರೂಢ ಸರ್ಕಾರ ಕ್ರಮಕೈಗೊಳ್ಳಬೇಕು. ಬಹುವರ್ಷಗಳ ಕನಸಾಗಿರುವ ಕೆಎಸ್‍ಆರ್‍ಟಿಸಿ ಡಿಪೋ ಸ್ಥಾಪನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ಎಸ್.ಡಿ. ವಿಜೇತ್ ಅವರು ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಜವರಪ್ಪ ವಹಿಸಿದ್ದರು. ಪದಾಧಿಕಾರಿಗಳಾದ ರಾಣಿ ರವೀಂದ್ರ, ಡಿ.ಪಿ. ಲೋಕೇಶ್ ಅವರುಗಳು ಉಪಸ್ಥಿತರಿದ್ದರು.