ಮಡಿಕೇರಿ, ಜೂ. 5: ಯುವ ಚಟುವಟಿಕೆಗಳಿಗಾಗಿ ನಗರದಲ್ಲಿ ನಿರ್ಮಾಣಗೊಂಡಿರುವ ಯುವಭವನ ವನ್ನು ಯುವ ಒಕ್ಕೂಟಕ್ಕೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿ ತಾ.9 ರಂದು ಜಿಲ್ಲಾ ಯುವ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆಗೆ ಕಗ್ಗೋಡ್ಲುವಿನ ಶ್ರೀ ಕಾವೇರಿ ಯುವಕ ಸಂಘ ಬೆಂಬಲ ಸೂಚಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಹೆಚ್. ಚಿದಾನಂದ, ಕಾರ್ಯದರ್ಶಿ ತನುಕುಮಾರ್ ಹಾಗೂ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಕೆ.ಎಂ. ಮೋಹನ್ ತಕ್ಷಣ ಯುವಭವನವನ್ನು ಯುವ ಒಕ್ಕೂಟದ ಚಟುವಟಿಕೆಗಳಿಗೆ ಬಿಟ್ಟು ಕೊಡ ಬೇಕೆಂದು ಒತ್ತಾಯಿಸಿದ್ದಾರೆ.
*ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದ ಶ್ರೀ ಭಗವತಿ ಯುವಕ ಸಂಘ ಈ ಪ್ರತಿಭಟನೆಗೆ ಬೆಂಬಲ ನೀಡಲಿದೆ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಮಂಡುವಂಡ ಟಾಟಾ ದೇವಯ್ಯ ಹಾಗೂ ಕಾರ್ಯದರ್ಶಿ ಬಿ.ಎನ್. ಪ್ರಸಾದ್ ತಿಳಿಸಿದ್ದಾರೆ.
*ಜಿಲ್ಲಾ ಯುವ ಭವನವನ್ನು ಯುವ ಚಟುವಟಿಕೆಗಳಿಗೆ ನೀಡದೆ ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ದನ್ನು ಖಂಡಿಸಿ ತಾ. 9ರಂದು ಜಿಲ್ಲಾ ಯುವ ಒಕ್ಕೂಟವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿ ಕೊಂಡಿರುವ ಪ್ರತಿಭಟನೆಗೆ ಮೇಕೇರಿ ಸ್ವಾಗತ ಯುವಕ ಸಂಘ ಬೆಂಬಲ ನೀಡಲಿದ್ದು, ಆ ದಿನ ಸಂಘದ ಸರ್ವ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳ ಲಿದ್ದಾರೆಂದು ಸ್ವಾಗತ ಸಂಘದ ಅಧ್ಯಕ್ಷ ಜೆ. ಹರೀಶ್ ತಿಳಿಸಿದ್ದಾರೆ.