ಕುಶಾಲನಗರ, ಜೂ. 5: ರಾಜ್ಯದಲ್ಲಿ ನದಿ ಸಂರಕ್ಷಣೆಗೆ ಕಾನೂನು ರೂಪಿಸಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸಧ್ಯದಲ್ಲೇ ಯೋಜನೆ ರೂಪಿಸಲಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ.
ತಲಕಾವೇರಿಗೆ ಭೇಟಿ ನೀಡಿದ ಸಂದರ್ಭ ಅವರು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಮನವಿ ನೀಡಿದ ಸಂದರ್ಭ ಮಾತನಾಡಿ, ನದಿ ಸಂರಕ್ಷಣೆ ನಿಟ್ಟಿನಲ್ಲಿ ಕಳೆದ ವರ್ಷ ಕಾನೂನು ರೂಪಿಸುವ ನಿಟ್ಟಿನಲ್ಲಿ ಕರಡು ಪ್ರತಿ ಸಿದ್ದಪಡಿಸಲಾಗಿತ್ತು. ಈ ಬಾರಿ ಆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವದಾಗಿ ತಿಳಿಸಿದರು. ನದಿ ಸಂರಕ್ಷಣೆಗೆ ಸರಕಾರದ ಯೋಜನೆಗೆ ಕಾಯುವ ಮುನ್ನ ಜನರು ಸ್ವಯಂಪ್ರೇರಿತರಾಗಿ ಜಾಗೃತರಾಗಬೇಕೆಂದು ಸಚಿವರು ಕರೆ ನೀಡಿದರು.
ಇದೇ ಸಂದರ್ಭ ಸಚಿವರೊಂದಿಗೆ ಇದ್ದ ಆದಿಚುಂಚನಗಿರಿ ಸಂಸ್ಥಾನದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಸಚಿವರಿಗೆ ನದಿ ಮಾಲಿನ್ಯಗೊಳ್ಳುತ್ತಿರುವ ಬಗ್ಗೆ ಮಾಹಿತಿ ಒದಗಿಸಿದರು. ಈ ಸಂಬಂಧ ಸರಕಾರದ ಮೂಲಕ ಶಾಶ್ವತ ಯೋಜನೆಯನ್ನು ರೂಪಿಸುವಂತೆ ಸಚಿವರಿಗೆ ಸ್ವಾಮೀಜಿಗಳು ಸಲಹೆ ನೀಡಿದರು.
ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖ ರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್‍ಕುಮಾರ್, ಚಿಲ್ಲನ ಗಣಿಪ್ರಸಾದ್ ಮತ್ತಿತರರು ಇದ್ದರು.