ಮಡಿಕೇರಿ, ಜೂ. 5: ಸಮಾಜ ಅಭಿವೃದ್ಧಿಯಾಗಬೇಕಾಗಿರುವದು ಎಷ್ಟು ಅನಿವಾರ್ಯವೋ ಪರಿಸರ ಸಂರಕ್ಷಣೆ ಕೂಡ ಅಷ್ಟೇ ಮುಖ್ಯ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಾವೇರಿ ನದಿ ಸ್ವಚ್ಛತಾ ಆಂದೋಲನ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಪರಿಸರವನ್ನು ರಕ್ಷಿಸದೆ ನಿರ್ಲಕ್ಷ್ಯ ವಹಿಸಿದರೆ ಮುಂದೊಂದು ದಿನ ಉಸಿರಾಟಕ್ಕೆ ಗಾಳಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸಲಹೆಯಿತ್ತರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಮಾತನಾಡಿ, ಪರಿಸರ ಉಳಿದರೆ ಮಾತ್ರ ಜೀವರಾಶಿಗಳಿಗೂ ಬದುಕಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೂ ಪರಿಸರವನ್ನು ಸಂರಕ್ಷಿಸುವ ಕರ್ತವ್ಯ ಎಲ್ಲರದ್ದಾಗಬೇಕೆಂದರು.

ಭಾರತ್ ಸ್ಕೌಟ್ಸ್ ಗೈಡ್ಸ್‍ನ ಪ್ರಮುಖರಾದ ಕೆ.ಟಿ. ಬೇಬಿಮ್ಯಾಥ್ಯು ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡುವಂತಾಗಬೇಕು. ಕೊಡಗಿನ ಸುಂದರ ಪರಿಸರ ಉಳಿಸಿಕೊಳ್ಳುವಲ್ಲಿ ಎಲ್ಲರೂ ಪಣತೊಡಬೇಕೆಂದರು.

ಜಿ.ಪಂ.ಸಿಇಓ ಚಾರುಲತಾ ಸೋಮಲ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ದಿನವೂ ಪರಿಸರ ಬಗ್ಗೆ ಜಾಗೃತಿ ಇರಬೇಕು ಎಂದು ಹೇಳಿದರು.

ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಮಾತನಾಡಿ, ಜನರನ್ನು ಪ್ರಕೃತಿಯೊಂದಿಗೆ ಸಂಪರ್ಕಿಸೋಣ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪರಿಸರ ಸಂರಕ್ಷಣೆ ಕುರಿತು ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್ ವಾಸ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಸ್ಕೌಟ್ಸ್ ಪ್ರಧಾನ ಆಯುಕ್ತ ಕೆ.ಬಿ. ಕಾಳಪ್ಪ ಇತರರು ಇದ್ದರು.

ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿದರು. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಟಿ.ಜಿ. ಪ್ರೇಮ್ ಕುಮಾರ್ ವಂದಿಸಿದರು.

ಪರಿಸರ ಜಾಥಾಗೆ ಚಾಲನೆ

ನಗರದ ರಾಜಾಸೀಟು ಉದ್ಯಾನವನದ ಪುಟಾಣಿ ರೈಲು ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಅವರು ಗಿಡ ನೆಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಪರಿಸರ ಜಾಥಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಪರಿಸರ ಘೋಷಣೆಯ ಪ್ಲೇ ಕಾರ್ಡ್‍ಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.