ಮಡಿಕೇರಿ, ಮೇ 17: ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‍ನ ಪದಾಧಿಕಾರಿಗಳ ಸ್ಥಾನಕ್ಕೆ ನಿನ್ನೆ ಹಾಗೂ ಇಂದು ಚುನಾವಣೆ ನಡೆದಿದ್ದು, ಈ ಚುನಾವಣೆ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತಾ. 16ರಂದು ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ತಾ.17ರಂದು ಮತ ಚಲಾವಣೆಯಾಗಿದೆ.

ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಒಂಭತ್ತು ಮಂದಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 58 ಮಂದಿ ಕಣದಲ್ಲಿದ್ದರೆ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಪಾಜೆಯ ಹನೀಫ್ ಮಾತ್ರ ನಾಮಪತ್ರ ಸಲ್ಲಿಸಿದ್ದು, ಇವರ ಆಯ್ಕೆ ಖಚಿತವಾಗಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ಜಮ್ಮಡ ಸೋಮಣ್ಣ, ಟಿ.ಹೆಚ್. ಅದ್ರಾಮ್ ಹಾಗೂ ಸೈನುದ್ದೀನ್ ಸ್ಪರ್ಧೆಯಲ್ಲಿದ್ದು, ಮಡಿಕೇರಿ ಕ್ಷೇತ್ರಕ್ಕೆ ಮಿತಿನ್ ಕುಮಾರ್, ಸೋಹಿಲ್ ಬಲಮುರಿ ಕಣದಲ್ಲಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಾಫಿ ಕೊಟ್ಟಮುಡಿ, ಹೂವಯ್ಯ, ರಜಿತ್ ಹಾಗೂ ಮುರುಗನ್ ಕಣದಲ್ಲಿದ್ದಾರೆ.

ವೀರಾಜಪೇಟೆ ಕ್ಷೇತ್ರದಲ್ಲಿ 530 ಮಂದಿಗೆ ಮತದ ಹಕ್ಕಿದ್ದು, 349 ಮತ ಚಲಾವಣೆಯಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ 335 ಮತಗಳ ಪೈಕಿ 179 ಮತ ಚಲಾವಣೆಯಾಗಿದೆ.

ಜಿಲ್ಲಾ ಪದಾಧಿಕಾರಿಗಳ ಸ್ಥಾನಕ್ಕೆ ಸಂಬಂಧಿಸಿದಂತೆ ತಾ. 18ರಂದು (ಇಂದು) ಹಾಗೂ ರಾಜ್ಯ ಪದಾಧಿಕಾರಿಗಳ ಸ್ಥಾನಕ್ಕೆ ಸಂಬಂಧಿಸಿದಂತೆ ತಾ.21ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ಉಸ್ತುವಾರಿಯಾಗಿ ಅಖಿಲಭಾರತ್ ಯುವ ಕಾಂಗ್ರೆಸ್‍ನ ಪ್ರಮುಖ ರಾಜು ಕಾರ್ಯನಿರ್ವಹಿಸಿದ್ದು, ಇವರೊಂದಿಗೆ ತೆನ್ನೀರ ಮೈನಾ ಹಾಗೂ ರಿಷಿಕುಮಾರ್ ಕಾರ್ಯನಿರ್ವಹಿಸಿದ್ದಾರೆ.